ಒಂದೇ ರಾತ್ರಿ ಹಲವು ಕಾಲೇಜುಗಳಲ್ಲಿ ಕಳ್ಳತನ ಯತ್ನ

4ss2bharathi colege
ಶನಿವಾರಸಂತೆ ಭಾರತಿ ಡಿಗ್ರಿ ಕಾಲೇಜಿನಲ್ಲಿ ಭಾನುವಾರ ರಾತ್ರಿ ಕಳ್ಳರು ಕಚೇರಿ ಬಾಗಿಲು ಒಡೆದಿರುವುದು ಹಾಗೂ ಸೋಮವಾರ ಬೆಳಗ್ಗೆ ಪೊಲೀಸ್ ಸಿಬ್ಬಂದಿ ಶ್ವಾನದಳ ತಂಡದಿಂದ ಪರಿಶೀಲನೆ ನಡೆಸಿದರು. ಎಸ್‌ಎಸ್4 ಕೊಡ್ಲಿಪೇಟೆ ಡಿಗ್ರಿ ಕಾಲೇಜಿನ ಪ್ರಾಂಶುಪಾಲರ ಕಚೇರಿ ಬಾಗಿಲನ್ನು ಒಡೆದಿರುವ ಕಳ್ಳರು.
Published on

ಶನಿವಾರಸಂತೆ: ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜುಗಳಲ್ಲಿ ಭಾನುವಾರ ರಾತ್ರಿ ಏಕ ಕಾಲಕ್ಕೆ ಸರಣಿ ಕಳ್ಳತನ ಯತ್ನ ನಡೆದಿದೆ.

ಭಾರತಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶಿಸಿದ ಕಳ್ಳರು ಪ್ರಾಂಶುಪಾಲರ ಚೇಂಬರ್, ವಿದ್ಯಾಸಂಸ್ಥೆಯ ಮುಖ್ಯ ಕಚೇರಿ ಹಾಗೂ ಸ್ಟೋರ್ ರೂಮ್ ಬಾಗಿಲಿನ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಚೇರಿಯೊಳಗಿದ್ದ ಕೀಗೊಂಚಲಿನಿಂದ ಗಾಡ್ರೇಜ್ ಬೀರುಗಳ ಬಾಗಿಲನ್ನು ತೆಗೆದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಕಳ್ಳರು ಪಕ್ಕದ ಪದವಿ ಪೂರ್ವ ಕಾಲೇಜಿನ ಮುಖ್ಯ ಕಚೇರಿಯ ಹಿಂಭಾಗದ ಕಿಟಿಕಿ ಬಾಗಿಲನ್ನು ತೆಗೆದು ಬಡಿಗೆಯ ಸಹಾಯದಿಂದ ಕಚೇರಿಯೊಳಗಿದ್ದ ಕಳ್ಳರು ಕೀಗೊಂಚಲನ್ನು ತೆಗೆದುಕೊಂಡು ಕಚೇರಿಯ ಬಾಗಿಲಿನ ಬೀಗ ತೆಗೆದು ಕಚೇರಿಯೊಳಗೆ ನುಗ್ಗಿದ್ದ ಕಳ್ಳರು ಅಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಕೀಗೊಂಚಲನ್ನು ಪಕ್ಕದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಿಸಾಡಿ ಹೋಗಿದ್ದಾರೆ. ಕಳ್ಳರು ಪ್ರಥಮ ದರ್ಜೆ ಕಾಲೇಜು ಕೊಠಡಿಯ ಬಾಗಿಲಿನ ಬೀಗದ ಕೀ ಸೇರಿದಂತೆ ಗಾಡ್ರೇಜ್ ಬೀರುಗಳ ಕೀಗೊಂಚಲುಗಳನ್ನು ಅಲ್ಲಲ್ಲಿ ಬಿಸಾಡಿ ಹೋಗಿದ್ದಾರೆ. ಸ್ಟೋರ್‌ರೂಮ್‌ನಲ್ಲಿದ್ದ ತಾಮ್ರದ ಜಾಗಟೆಯನ್ನು ಆವರಣದಲ್ಲಿ ಎಸೆದಿದ್ದಾರೆ. ಕಳ್ಳರಿಗೆ ಯಾವುದೇ ಹಣ, ಬೆಲೆಬಾಳುವ ವಸ್ತುಗಳು ಸಿಗದೆ ನಿರಾಸೆಯಿಂದ ವಾಪಸ್ಸಾಗಿದ್ದಾರೆ.

ಸೋಮವಾರ ಬೆಳಗ್ಗೆ ವಿದ್ಯಾಸಂಸ್ಥೆ ಮುಖ್ಯಸ್ಥರು, ಸಿಬ್ಬಂದಿ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶನಿವಾರಸಂತೆ ವೃತ್ತ ನಿರೀಕ್ಷಕ ಮಂಜುನಾಥ್, ಠಾಣಾಧಿಕಾರಿ ಗೋವಿಂದರಾಜ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮಡಿಕೇರಿ ಶ್ವಾನದಳ ಮತ್ತು ಬೆರಳಚ್ಚು ತಂಡದ ಸಿಬ್ಬಂದಿ ಹಾಗೂ ಬ್ರೋನ್ ಹೆಸರಿನ ಶ್ವಾನದ ಸಹಾಯದಿಂದ ಸ್ಥಳ ಪರಿಶೀಲನೆ ನಡೆಸಿದರು.

ಭಾನುವಾರ ರಾತ್ರಿ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳ್ಳತನ ನಡೆದಿದ್ದು, ಪ್ರಾಂಶುಪಾಲರ ಕಚೇರಿ ಹಾಗೂ ವಿದ್ಯಾಸಂಸ್ಥೆಯ ಮುಖ್ಯ ಕಚೇರಿ ಬಾಗಿಲಿನ ಬೀಗ ಒಡೆದ ಕಳ್ಳರು ಕಚೇರಿಯೊಳಗಿದ್ದ ಕೀಗೊಂಚಲನ್ನು ತೆಗೆದು ಗಾಡ್ರೇಜ್ ಬೀರುಗಳ ಬಾಗಿಲನ್ನು ತೆಗೆದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ ಹಣ ಸಿಗದ ಹಿನ್ನೆಲೆ ಕೀಗೊಂಚಲನ್ನು ಅಲ್ಲೆ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಪಕ್ಕದ ಬ್ಯಾಡಗೊಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಚೇರಿಯ ಬಾಗಿಲನ್ನು ಒಡೆದ ಕಳ್ಳರು ಗಾಡ್ರೇಜ್ ಬೀರನ್ನು ತೆಗೆದ ಕಳ್ಳರು ಹುಡುಕಾಟ ನಡೆಸಿ ಬೀರಿನಲ್ಲಿದ್ದ ಕಡತ ದಾಖಲಾತಿಗಳನ್ನು ಹರಡಿ ಹೋಗಿದ್ದಾರೆ.

ಎಲ್ಲ ಕಳ್ಳತನದ ಪ್ರಕರಣಗಳು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net