ಒಂದೇ ಬಾಳೆಗೊನೆ ಒಂದೂವರೆ ಕ್ವಿಂಟಾಲ್​ಗೂ ಅಧಿಕ

13KWR1
Published on

ಕಾರವಾರ: ಒಂದು ಬಾಳೆಗೊನೆ ಎಂದರೆ ಎಷ್ಟು ಎತ್ತರ ಇರಬಹುದು..? ನಾಲ್ಕಡಿ ಬಾಳೆಗೊನೆ ಸಿಕ್ಕಿದರೆ ಅದು ದೊಡ್ಡದು ಎಂದು ಹೇಳಬಹುದು ಆದರೆ, ಇಲ್ಲೊಬ್ಬರು ಏಳು ಅಡಿ ಎತ್ತರದ ಬಾಳೆ ಬೆಳೆದಿದ್ದಾರೆ.

ಯಲ್ಲಾಪುರ ತಾಲೂಕಿನ ಕನ್ನೂರು-ಹೆಗ್ಗರಣೆ ನಡುವಿನ ರಸ್ತೆಯ ಕಾನಕೊಡ್ಲು ಗ್ರಾಮದ ಪ್ರಸಾದ ಹೆಗಡೆ ತಮ್ಮ ತೋಟದಲ್ಲಿ ಈ ಅಪರೂಪದ ಬಾಳೆ ಬೆಳೆದಿದ್ದಾರೆ. ಸಹಸ್ರ ಬಾಳೆ ಎಂಬ ತಳಿಯ ಈ ಬಾಳೆಯನ್ನು ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋತ್ಯಾನಹಟ್ಟಿಯ ಶಿವನಗೌಡ ಎಂಬ ರೈತರೊಬ್ಬರಿಂದ ತಂದು ಬೆಳೆದಿದ್ದಾರೆ. ಬಾಳೆ ಮೊದಲ ಕೊನೆ ಬಿಟ್ಟಿದ್ದು, ಏಳು ಅಡಿಗೂ ಹೆಚ್ಚು ಉದ್ದವಿದೆ. ಅಂದಾಜು ಒಂದೂವರೆ ಕ್ವಿಂಟಾಲ್​ಗೂ ಅಧಿಕ ತೂಕ ಬಂದಿದೆ.

ಅಪರೂಪದ ಬಾಳೆ: ಮಲೆನಾಡಿನ ಭಾಗದಲ್ಲಿ ಸದ್ಯ ಬಳಕೆಯಲ್ಲಿರುವ ಯಾಲಕ್ಕಿ ಬಾಳೆಯ ರೀತಿಯಲ್ಲಿ ಸಹಸ್ರ ಬಾಳೆಯಿರುತ್ತದೆ. ಸ್ಥಳೀಯ ತಳಿಯೋ ಅಥವಾ ವಿದೇಶಿ ತಳಿಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಬಾಳೆ ಗೊನೆ ಮರದ ಬುಡದವರೆಗೂ ಮುಟ್ಟುತ್ತದೆ. ಮರದ ರಕ್ಷಣೆಗೆ ಕಡ್ಡಾಯವಾಗಿ ಮರದ ಕಂಬ ಕೊಟ್ಟು ನಿಲ್ಲಿಸಬೇಕು.

ತಳಿ ಸಂರಕ್ಷಕ: ಪ್ರಸಾದ ಹೆಗಡೆ ಅಪರೂಪದ ತಳಿ ಸಂರಕ್ಷಕರು. ತಮ್ಮ 5 ಎಕರೆ ತೋಟದಲ್ಲಿ 8 ಜಾತಿಯ ಕಾಳು ಮೆಣಸು ಬೆಳೆದಿದ್ದಾರೆ. 6 ಜಾತಿಯ ಬಾಳೆ ಬೆಳೆದಿದ್ದಾರೆ. 45 ಜಾತಿಗೂ ಅಧಿಕ ಅಪ್ಪೆ ಮಿಡಿಯ ಗಿಡಗಳನ್ನೇ ಸಂಗ್ರಹಿಸಿದ್ದಾರೆ. ಹಣ್ಣು, ಹೂವು, ಔಷಧ ಸಸ್ಯಗಳು ಸೇರಿ 600ಕ್ಕೂ ಅಧಿಕ ಜಾತಿಯ ವೈವಿಧ್ಯಮಯ ತಳಿಗಳು ಅವರ ತೋಟದಲ್ಲಿವೆ. ದಾಲ್ಚಿನಿ ಬೆಳೆದು ಯಶಸ್ವಿಯಾಗಿದ್ದು, ಅವರ ವಾರ್ಷಿಕ ಆದಾಯ ಯಾವುದೇ ಸಾಫ್ಟ್​ವೇರ್ ಇಂಜಿನಿಯರ್ ಆದಾಯಕ್ಕೆ ಕಡಿಮೆ ಇಲ್ಲ ಎನ್ನುತ್ತಾರೆ. ತಳಿ ಸಂರಕ್ಷಕ ರೈತ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಡಾ.ಎಂ. ಎಚ್. ಮರಿಗೌಡ ಪ್ರಶಸ್ತಿ, ಕೇಂದ್ರ ಸರ್ಕಾರದ ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟಿ ಮತ್ತು ಫಾರ್ಮರ್ಸ್ ರೈಟ್ ಅಥಾರಿಟಿಯಿಂದ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ಇದುವರೆಗೆ ಸಂದಿವೆ.

ಒಟ್ಟು 3 ವಿಶಿಷ್ಟ ಜಾತಿಯ ಬಾಳೆಯನ್ನು ತಂದು ಬೆಳೆಸಿದ್ದು, ಅದರಲ್ಲಿ ಸಹಸ್ರ ಬಾಳೆ ಗೊನೆ ಬಿಟ್ಟಿದೆ. ಸದ್ಯ ಒಂದೇ ಮರವಿದ್ದು, ಅದನ್ನೇ ಬೆಳೆಸಬೇಕಿದೆ. ಇದು ವಾಣಿಜ್ಯಿಕವಾಗಿ ಬೆಳೆಯುವುದು ಕಷ್ಟದಾಯಕವೇ ಎಂದು ಹೇಳಬೇಕು. ಏಕೆಂದರೆ ಕಡಿದು ಸಾಗಿಸುವುದು, ತೂಕ ಮಾಡುವುದು ಬಲು ಕಷ್ಟ.| ಪ್ರಸಾದ ಹೆಗಡೆ ಯಲ್ಲಾಪುರ ಪ್ರಗತಿಪರ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net