ಒಂದೇ ದಿನ 74 ಪಾಸಿಟಿವ್!

corona
Published on

ಬೀದರ್: ಜಿಲ್ಲೆಯಲ್ಲಿ ಸೋಮವಾರ ಕರೊನಾ ಸ್ಫೋಟವೇ ಸಂಭವಿಸಿದೆ. ಆರು ತಿಂಗಳ ಬಳಿಕ ಒಂದೇ ದಿನ 74 ಪಾಸಿಟಿವ್ ಕೇಸ್ ಬಂದಿದ್ದು, ಎರಡನೇ ಅಲೆ ತಲ್ಲಣ ಸೃಷ್ಟಿಸಿದೆ.

ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ತನ್ನ ಕೆನ್ನಾಲಗೆ ಚಾಚುತ್ತಿದೆ. ನಿತ್ಯವೂ 40ಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿವೆ. ಕಳೆದೊಂದು ವಾರದಲ್ಲಿಯೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ. ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಹಳೇ ಕಟ್ಟಡದಲ್ಲಿರುವ 300 ಹಾಸಿಗೆಯ ಕೋವಿಡ್ ಕೇಂದ್ರ ಭರ್ತಿಯಾಗಿದ್ದು, ಇತರೆಡೆ ಕೋವಿಡ್ ಕೇಂದ್ರ ಆರಂಭಿಸುವ ಕೆಲಸ ನಡೆದಿದೆ.

ಭಾನುವಾರ ಜಿಲ್ಲೆಯಲ್ಲಿ 54 ಪ್ರಕರಣ ವರದಿಯಾದರೆ, ಸೋಮವಾರ ಹೊಸದಾಗಿ 74 ಕೇಸ್ ಪತ್ತೆಯಾಗಿವೆ. ಇದು ಕಳೆದ ಜುಲೈ, ಆಗಸ್ಟ್ ನಂತರದ ಅತಿ ಹೆಚ್ಚು ಸಂಖ್ಯೆಯ ದಾಖಲೆ ಎನಿಸಿದೆ. ಮೂಲಗಳ ಪ್ರಕಾರ ಇಲ್ಲಿನ ಬ್ರಿಮ್ಸ್ಗೆ 3617 ಜನರ ಸ್ಯಾಂಪಲ್ ಬಂದಿದ್ದು, ಇದರಲ್ಲಿ ಮಾಡಲಾದ 2120 ಪರೀಕ್ಷೆಯಲ್ಲಿ 74 ಪಾಸಿಟಿವ್ ಬಂದಿವೆ. ಬೀದರ್ ನಗರದ ವಿವಿಧ ಬಡಾವಣೆಗಳಲ್ಲದೆ ಜಿಲ್ಲೆಯ ಹಲವು ಗ್ರಾಮಗಳಿಗೆ ಸೋಂಕು ವ್ಯಾಪಿಸಿದೆ. ಹೀಗಾಗಿ ದಿನೇ ದಿನೆ ಪ್ರಕರಣ ಜಾಸ್ತಿ ಬರುವ ಸಾಧ್ಯತೆಗಳಿದ್ದು, ಜನರ ಆತಂಕ ಹೆಚ್ಚಿಸಿದೆ.

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿತ್ಯವೂ ಸರಾಸರಿ 50 ರಿಂದ 55 ಹೊಸ ಪಾಸಿಟಿವ್ ಬರುತ್ತಿರುವುದು ಸಾಕಷ್ಟು ಭೀತಿ ಸೃಷ್ಟಿಸಿದೆ. ಈಗಿನ ನಿತ್ಯದ ಕರೊನಾ ಏರುಗತಿ ನೋಡಿದರೆ ಜಿಲ್ಲೆಯ ಮಹಾಮಾರಿಯ ಎರಡನೇ ಅಲೆಗೆ ಸಿಲುಕಿರುವುದು ಸ್ಪಷ್ಟವಾಗಿದೆ. ಇಷ್ಟಾದರೂ ಜಿಲ್ಲೆಯ ಶೇ. 80ರಷ್ಟು ಜನ ಕೋವಿಡ್ ನಿಯಮ ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ವಿವಿಧೆಡೆ ಸಭೆ, ಸಮಾರಂಭ ಭರ್ಜರಿ ನಡೆದಿದ್ದು, ಜನಜಾತ್ರೆ ಸೇರುವುದಕ್ಕೆ ಕಡಿವಾಣ ಬಿದ್ದಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ನಿತ್ಯದ ಪಾಸಿಟಿವ್ ಸಂಖ್ಯೆ ಮೂರಂಕಿ ಗಡಿ ದಾಟುವ ಲಕ್ಷಣಗಳು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net