ಒಂದೇ ದಿನ 631 ದಾಖಲೆ ಸೋಂಕಿತರು

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಕರೊನಾ ಸುನಾಮಿ ಎಬ್ಬಿಸಿದೆ. ಮೊದಲ ಬಾರಿಗೆ ಒಂದೇ ದಿನ ದಾಖಲೆಯ ಅಂಕಿ-ಅಂಶಗಳು ಬಂದಿದ್ದು, ಜನರಲ್ಲಿ ಗಾಬರಿಯನ್ನು ಇಮ್ಮಡಿಸಿದೆ. ಇಂದು ಒಂದೇ ದಿನ ಆರು ಶತಕ ಬಾರಿಸಿದ್ದು, ಅ ಮೂಲಕ ನಾಲ್ಕು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕು ಸಾವಿರ ದಾಟಿದಂತಾಗಿದೆ.
ಇಲ್ಲಿಯವರೆಗೆ ಇಷ್ಟೊಂದು ಪ್ರಮಾಣದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ದಾಖಲಾಗಿರಲಿಲ್ಲ. ಒಮ್ಮೆಲೇ ಸಂಖ್ಯೆ 600 ದಾಟಿದ್ದು ನೋಡಿದರೆ ಇನ್ನು ಇದು ಯಾವ ಮಟ್ಟಕ್ಕೆ ಮುಟ್ಟುತ್ತದೋ ಹೇಳದಂತಾಗಿದೆ.
ಸೋಂಕಿಗೆ ಇಬ್ಬರು ನಿಧನ : ಕರೊನಾ ಸೋಂಕಿನಿಂದ ಕಲಬುರಗಿ ನಗರದಲ್ಲಿ ಮತ್ತಿಬ್ಬರು ನಿಧನ ಹೊಂದಿದ್ದು, ಇದರಿಂದ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಎನ್.ಆರ್.ಕಾಲನಿಯ 83 ವರ್ಷದ ವೃದ್ಧ (ಪಿ-80114) ಜು.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದು, ಸೋಮವಾರ ಸೋಂಕು ತಗುಲಿರುವುದು ದೃಢವಾಗಿದೆ.
ಐ.ಎಲ್.ಐ. ಹಿನ್ನೆಲೆಯೊಂದಿಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ 65 ವರ್ಷದ ವೃದ್ಧೆ (ಪಿ-94350) ಜು.22 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು.23 ರಂದು ಅಲ್ಲಿಯೆ ನಿಧನಹೊಂದಿದ್ದಾರೆ ಎಂದು ತಿಳಿಸಿದರು.
ಇಂದು 73 ಜನ ಚೇತರಿಸಿಕೊಂಡಿದ್ದೂ ಸೇರಿ ಒಟ್ಟು 2271 ಜನ ಬಿಡುಗಡೆಗೊಂಡಿದ್ದಾರೆ. ಇಂದಿನ 631 ಸೇರಿ ಸೋಂಕಿತರ ಸಂಖ್ಯೆ 4495ಕ್ಕೇರಿದ್ದು, ಸೋಂಕಿನ ವಿಷಯದಲ್ಲಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. 2158 ಸಕ್ರಿಯ ಪ್ರಕರಣಗಳಿವೆ. ಐಸಿಯುದಲ್ಲಿ 29 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಪತ್ತೆಯಾಗಿರುವ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕರೊನಾ ಸೋಂಕಿತರಿಗಾಗಿ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳನ್ನು ತೆಗೆದುಕೊಂಡಿದ್ದರೂ ಸಹ ಅನೇಕ ಕಡೆ ಬೆಡ್ಗಳು ಮತ್ತು ವೆಂಟಿಲೇಟರ್ಗಳು ಸಿಗದೇ ಪರದಾಡುವಂತಾಗಿದೆ. ಕೆಲವು ಕರೊನಾ ಸೋಂಕಿತರ ಕುಟುಂಬಸ್ಥರು ತಮ್ಮವರನ್ನು ಆಸ್ಪತ್ರೆಗೆ ಸೇರಿಸಲು ಪರದಾಡುತ್ತಿದ್ದಾರೆ. ಪ್ರತಿನಿತ್ಯ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಚೇತರಿಕೆ ಪ್ರಮಾಣದಲ್ಲಿ ಆಗಿರುವ ಕುಸಿತವೇ ಇದಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net