ಒಂದೇ ದಿನ 247 ಮಂದಿಗೆ ಸೋಂಕು !

corona
Published on

ಬೀದರ್: ಕರೊನಾ ಎರಡನೇ ಅಲೆ ಗಡಿ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇದೇ ಮೊದಲ ಸಲ ಒಂದೇ ದಿನ ದಾಖಲೆಯ 247 ಪಾಸಿಟಿವ್ ಕೇಸ್ ಬಂದಿರುವುದು ಆತಂಕ ಮೂಡಿಸಿದೆ.

ಒಂದು ತಿಂಗಳಿಂದ ಕ್ರಮೇಣ ಸೋಂಕು ಹೆಚ್ಚುತ್ತಲೇ ಸಾಗಿದೆ. ಒಂದು ವಾರದಿಂದ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಸೋಮವಾರ ಮಹಾ ಸ್ಫೋಟವಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ 2020ರ ಏಪ್ರಿಲ್ 1ರಿಂದ ಪಾಸಿಟಿವ್ ಪ್ರಕರಣ ವರದಿಯಾಗುತ್ತಿವೆ. ಒಂದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿ ಒಂದೇ ದಿನ 247 ಜನರಿಗೆ ಸೋಂಕು ತಗುಲಿದ್ದು, ಗಡಿ ಜಿಲ್ಲೆ ಎರಡನೇ ಅಲೆ ಸುಳಿಗೆ ಸಿಲುಕಿ ನಲುಗುವ ಎಚ್ಚರಿಕೆ ನೀಡಿದೆ.

ಒಂದು ವಾರದಲ್ಲಿ 675 ಹೊಸ ಪ್ರಕರಣ ವರದಿಯಾಗಿವೆ. ಇದರಲ್ಲಿ ಸೋಮವಾರದ ಸಂಖ್ಯೆಯೇ 247. ಅಲ್ಲದೆ 75 ವರ್ಷದ ವೃದ್ಧ ಬಲಿಯಾಗಿದ್ದಾರೆ. 2ನೇ ಅಲೆ ಎದ್ದ ನಂತರ ಮಾರ್ಚ್ ನಲ್ಲಿ ಏಳು ಸೋಂಕಿತರು ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ವಕೀಲರು.

ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಜನರು ಮಾತ್ರ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ ಸೂಚಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಅನೇಕರು ಹೋಳಿ ಹಬ್ಬದ ರಂಗಿನಾಟದಲ್ಲಿ ತೊಡಗಿ ಮಾಸ್ಕ್ ತೊಡದೆ, ಪರಸ್ಪರ ಅಂತರ ಕಾಪಾಡದೆ ಸಂಭ್ರಮಿಸಿದರು. ಕರೊನಾ ಆರಂಭದಿಂದ ಈವರೆಗೆ ಜಿಲ್ಲೆಯಲ್ಲಿ 8792 ಜನರಿಗೆ ಪಾಸಿಟಿವ್ ಬಂದಿದ್ದು, 7858 ಜನ ಚೇತರಿಕೆಯಾಗಿದ್ದಾರೆ. 748 ಕೇಸ್ ಸಕ್ರಿಯವಾಗಿವೆ. 182 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಬ್ರಿಮ್ಸ್ ಲ್ಯಾಬ್ ಮುಖ್ಯಸ್ಥ
ಡಾ.ಸುಧೀಂದ್ರ ಪಾಸಿಟಿವ್

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ಮಾಲಿಕ್ಯೂಲರ್ ವೈರಾಲಜಿ ಲ್ಯಾಬ್- ಸೂಕ್ಷ್ಮಾಣು ರೋಗ ಪತ್ತೆ ಪ್ರಯೋಗಾಲಯದ ಪ್ರಧಾನ ಪರೀಕ್ಷಕ ಡಾ.ಸುಧೀಂದ್ರ ಕುಲಕರ್ಣಿ ಅವರಿಗೂ ಕರೊನಾ ಸೋಂಕು ದೃಢಪಟ್ಟಿದೆ. ಜ್ವರ ಬಂದಿದ್ದರಿಂದ ಟೆಸ್ಟ್ ಗೆ ಒಳಪಟ್ಟಿದಾಗ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಲ್ಯಾಬ್ ನ ತಂತ್ರಜ್ಞರು ಸೇರಿ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸುಧೀಂದ್ರ ಅವರು ಬ್ರಿಮ್ಸ್ ವಸತಿಗೃಹ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಯಾವುದೇ ರೋಗ ಲಕ್ಷಣಗಳಿಲ್ಲ. 2020ರ ಜೂನ್ 6ರಂದು ಇಲ್ಲಿ ವೈರಾಲಜಿ ಲ್ಯಾಬ್ ಆರಂಭವಾಗಿದೆ. ಮೈಕ್ರೋಬಯಾಲಜಿ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಡಾ.ಸುಧೀಂದ್ರ ಹೆಚ್ಚುವರಿ ಹೊಣೆಯಾಗಿ ಲ್ಯಾಬ್ ಪ್ರಧಾನ ಪರೀಕ್ಷಕರಾಗಿ ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಲ್ಯಾಬ್ ನಿಂದ 2.60 ಲಕ್ಷಕ್ಕೂ ಹೆಚ್ಚು ಕರೊನಾ ಟೆಸ್ಟ್ ಮಾಡಲಾಗಿದೆ. ಎರಡನೇ ಅಲೆಯಲ್ಲಿ ಸುಧೀಂದ್ರ ಅವರಿಗೆ ಸೋಂಕು ತಗುಲಿದೆ.

ವಾರದಲ್ಲೇ 675 ಪ್ರಕರಣ
ಜಿಲ್ಲೆಯಲ್ಲಿ ಏಳು ದಿನಗಳಲ್ಲಿ ಬರೋಬ್ಬರಿ 675 ಪಾಸಿಟಿವ್ ಕೇಸ್ ಬಂದಿವೆ. ಅಂದರೆ ನಿತ್ಯ ಸರಾಸರಿ 96 ಮಂದಿಗೆ ಸೋಂಕು ತಗುಲಿದೆ. ಕ್ರಮೇಣ ಮಹಾಮಾರಿ ವೇಗವಾಗಿ ವ್ಯಾಪಿಸುತ್ತಿದೆ. ಸೋಮವಾರ 247 ಪ್ರಕರಣ ಬಂದಿದ್ದು ಹೊಸ ದಾಖಲೆ. 27ರಂದು 62, 26ಕ್ಕೆ 76, 25ಕ್ಕೆ 57, 24ಕ್ಕೆ 77, 23ಕ್ಕೆ 82 ಹಾಗೂ 22ರಂದು 74 ಪಾಸಿಟಿವ್ ವರದಿಯಾಗಿವೆ. ಈ ಅವಧಿಯಲ್ಲಿ ಬ್ರಿಮ್ಸ್ ಲ್ಯಾಬ್ ನಲ್ಲಿ ದಾಖಲೆಯ 20 ಸಾವಿರ ಕರೊನಾ ಟೆಸ್ಟ್ ಮಾಡಲಾಗಿದೆ. 27ಕ್ಕೆ 5110 ಜನರ ಪರೀಕ್ಷೆ ನಡೆಸಲಾಗಿದೆ. ಇದು ಬ್ರಿಮ್ಸ್ ಲ್ಯಾಬ್ ದಿನದ ಅತಿ ಹೆಚ್ಚಿನ ಪರೀಕ್ಷಾ ದಾಖಲೆ ಎನಿಸಿದೆ.

ಜನಜಾತ್ರೆಗೆ ಬೀಳಬಹುದಾ ಬ್ರೇಕ್ ?
ಜಿಲ್ಲೆಯಲ್ಲಿ ಕರೊನಾ ನಿತ್ಯವೂ ಏರುಗತಿಯಲ್ಲಿ ಸಾಗಿದೆ. ತೀವ್ರ ಪ್ರಮಾಣದಲ್ಲಿ ಕುಗ್ಗಿದ್ದ ಸೋಂಕು ತಿಂಗಳಿಂದ ವ್ಯಾಪಕ ಹೆಚ್ಚಿರುವುದನ್ನು ಗಮನಿಸಿದರೆ ಜಿಲ್ಲೆ ಎರಡನೇ ಅಲೆ ಸುಳಿಗೆ ಸಿಲುಕಿರುವುದು ಸ್ಪಷ್ಟವಾಗಿದೆ. ಆದರೆ ಸಾರ್ವಜನಿಕರು ಮಾತ್ರ ಕೋವಿಡ್ ನಿಯಮ ಪಾಲನೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಇದು ಮತ್ತಷ್ಟು ಸಮಸ್ಯೆ ಸೃಷ್ಟಿಸುವ ಸಾಧ್ಯತೆಗಳಿವೆ. ಮಾಸ್ಕ್, ಪರಸ್ಪರ ಅಂತರ ಪಾಲನೆ ನಡೆಯುತ್ತಿಲ್ಲ. ನಾನಾ ಕಡೆ ಸಭೆ, ಸಮಾರಂಭ ಭರ್ಜರಿ ನಡೆದಿದ್ದು, ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆ. ಜಾತ್ರೆಗಳು ನಡೆಯುತ್ತಿವೆ. ಧಾರ್ಮಿಕ ಕ್ಷೇತ್ರ ಭಕ್ತರಿಂದ ತುಂಬಿವೆ. ಮದುವೆ ಸೇರಿ ವಿವಿಧ ಕಾರ್ಯಕ್ರಮಗಳು ಭರ್ಜರಿ ನಡೆದಿವೆ. ಎಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆ ಆಗುತ್ತಿಲ್ಲ. ಇವೆಲ್ಲ ಅಪಾಯದ ಮುನ್ಸೂಚನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net