

ವಿರಾಜಪೇಟೆ: ದೀನ ದಲಿತ, ಶೋಷಿತ ಜನಾಂಗದ ಉದ್ಧಾರಕ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಅಂಬಟ್ಟಿಯಲ್ಲಿರುವ ಶ್ರೀ ನಾರಾಯಣಗುರು ಮಂದಿರದಲ್ಲಿ ಇತ್ತೀಚೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬಿಲ್ಲವ ಸೇವಾ ಸಂಘ ವಿರಾಜಪೇಟೆ ತಾಲೂಕು ವತಿಯಿಂದ ನಾರಾಯಣಗುರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ವನಜಾ, ಸ್ವಾತಂತ್ರೃಪೂರ್ವದಲ್ಲಿ ನಮ್ಮ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಯಾವುದೇ ದೇವತಾ ಕಾರ್ಯಗಳು, ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಿಷೇಧ ಹೇರಲಾಗಿತ್ತು. ಈ ಸನ್ನಿವೇಶದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರು ಶಿವಲಿಂಗವನ್ನು ಸ್ಥಾಪಿಸಿ ಪೂಜೆಗೈಯಲು ಅನುಮತಿ ಮಾಡಿಕೊಟ್ಟರು. ಅಲ್ಲದೆ ಸಮಾಜದಲ್ಲಿ ಒಂದೇ ಜಾತಿ, ಒಂದೇ ಧರ್ಮ ಎಂದು ಸಾರಿದ ಮಹಾನ್ ಸಂತರಾದರು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ್ತ ಅಂಕ ಗಳಿಸಿದ ಪವಿತ್ರಾ, ನವೀನ್ ಹಾಗೂ ಪಿಯುಸಿಯಲ್ಲಿ ಕೃಷಿಕಾ, ಪ್ರಜ್ಞಾ, ದೀಪಿಕಾ, ನಿಹಾಲ್, ರಕ್ಷಾ, ತನ್ಮಯಿ, ಮೇಘನಾ, ಅಕ್ಷಯ್, ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಸುದೇಶ್, ವನಜಾ,ಆಟೋ ಚಾಲಕಿ ಸುಜಾತ ನೆಲ್ಯಹುದಿಕೇರಿ, ಜಾಜಿ ಅವರನ್ನು ಸನ್ಮಾನಿಸಲಾಯಿತು.
ಅದ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಬಿಲ್ಲವ ಸೇವಾ ಸಂಘದ ಅದ್ಯಕ್ಷ ಬಿ.ಎಂ.ಗಣೇಶ್, ಪ್ರಸ್ತುತ ಬಿಲ್ಲವ ಸೇವಾ ಸಂಘವು ಜನಪರ ಮತ್ತು ಜಾನಾಂಗದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಜನಾಂಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಸಹಾಯಧನವನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ತಾಲೂಕು ಬಿಲ್ಲವ ಸಂಘದ ಉಪಧ್ಯಕ್ಷ ಪುರುಷೋತಮ್, ಗೌರವಾಧ್ಯಕ್ಷ ರಾಜಾ ಪೂಜಾರಿ, ಗೋಣಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಮುಕುಂದ, ನಾರಾಯಣ ಹಳ್ಳಿಗಟ್ಟು, ಸುನಂದಾ ನಾರಾಯಣ, ಸಹ ಕಾರ್ಯದರ್ಶಿ ಲಕ್ಷ್ಮಣ್ ಮಣಿ ಉಪಸ್ಥಿತರಿದ್ದರು.
ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಜನಾಂಗ ಬಾಂಧವರು, ವಿಧ್ಯಾರ್ಥಿಗಳು ಹಾಜರಿದ್ದರು.