

ಬೀದರ್: ಒಂದೇ ಕಿಡ್ನಿ ಹೊಂದಿದ ಮಹಿಳೆಗೆ ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿ ಎರಡನೇ ಸಲ ಕ್ಯಾನ್ಸರ್ ಗಡ್ಡೆಗಳ ಸರ್ಜರಿ ಮಾಡುವಲ್ಲಿ ಹೈದರಾಬಾದ್ ಕೇರ್ ಆಸ್ಪತ್ರೆಯಲ್ಲಿರುವ ಬೀದರ್ ಮೂಲದ ಅಂಕಾಲಾಜಿಸ್ಟ್(ಕ್ಯಾನ್ಸರ್) ಸರ್ಜನ್ ಡಾ.ವಿಪಿನ್ ರಮೇಶ ಗೋಯಲ್ ಯಶಸ್ವಿಯಾಗಿದ್ದಾರೆ.
ಹುಮನಾಬಾದ್ ತಾಲೂಕಿನ ಮೀನಕೇರಾ ಗ್ರಾಮದ ಪಾರ್ವತಿ (50) ಎರಡನೇ ಸಲದ ಸರ್ಜರಿ ನಂತರ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಡಾ.ವಿಪಿನ್ ನೇತೃತ್ವದ ತಂಡದಲ್ಲಿ ವ್ಯಾಸ್ಕುಲರ್ ಸರ್ಜನ್ ಡಾ.ಪಿ.ಸಿ. ಗುಪ್ತಾ, ಅರವಳಿಕೆ ತಜ್ಞ ಡಾ.ಟಿ.ವಿ.ಎಸ್. ಗೋಪಾಲ್ ಇತರರಿದ್ದರು. ಹೊಟ್ಟೆ, ಕೆಳ ಹೊಟ್ಟೆ ಭಾಗದ ನಾಲ್ಕು ಕಡೆ ಬೆಳೆದಿದ್ದ ಗಡ್ಡೆಗಳನ್ನು 7 ಗಂಟೆ ಸರ್ಜರಿ ಮೂಲಕ ತೆಗೆಯಲಾಗಿದೆ.
ಪಾರ್ವತಿ ಅವರಿಗೆ ನಾಲ್ಕು ವರ್ಷದ ಹಿಂದೆ ಬಲಭಾಗದ ಕಿಡ್ನಿ ಪಕ್ಕದಲ್ಲಿ ಗಡ್ಡೆಯಾಗಿತ್ತು. ಇದು ಕ್ಯಾನ್ಸರ್ ರೂಪ ತಾಳಿತ್ತು. ಸೊಲ್ಲಾಪುರ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಕೊಂಡಿದ್ದು, ಈ ವೇಳೆ ಕಿಡ್ನಿ ಸಹ ಅನಿವಾರ್ಯವಾಗಿ ತೆಗೆದ ಕಾರಣ ಒಂದೇ ಕಿಡ್ನಿ ಇದೆ. ಇತ್ತೀಚೆಗೆ ಮತ್ತೆ ಕಾಲಿನ ತಳಭಾಗ(ಲೋವರ್ ಲಿಂಬ್), ಹೊಟ್ಟೆ, ಕೆಳ ಹೊಟ್ಟೆಯಲ್ಲಿ ವಿಪರೀತ ನೋವು, ಅಶಕ್ತತೆ ಸಮಸ್ಯೆ ಎದುರಾಯಿತು. ಬೀದರ್ ಅಪೆಕ್ಸ ಆಸ್ಪತ್ರೆಯಲ್ಲಿ ಡಾ.ಮಲ್ಲಿಕಾರ್ಜುನ ಎಮ್ಮೆ ಅವರಲ್ಲಿ ತಪಾಸಣೆ ಮಾಡಿಸಿದಾಗ ಸಮಸ್ಯೆ ಗಂಭೀರತೆ ಅರಿತು ಡಾ.ವಿಪಿನ್ ಅವರ ಬಳಿ ಕಳಿಸಿದರು. ಪೆಟ್ ಸಿಟಿ ಸಾ್ಕೃನ್ನಲ್ಲಿ ಮತ್ತೆ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಅಲ್ಲಿ ಪತ್ತೆ ಆಯಿತು.
ಒಂದೇ ಕಿಡ್ನಿ ಹೊಂದಿದ ಕಾರಣ ಸರ್ಜರಿ ರಿಸ್ಕ್ ಇತ್ತು. ಆದರೂ ಸರ್ಜರಿ ಅನಿವಾರ್ಯ ಎಂದು ಡಾ.ವಿಪಿನ್ ಹೇಳಿದರು. ಇದಕ್ಕೆ ಒಪ್ಪಿದಾಗ ಸಾಕಷ್ಟು ನಾಜೂಕಿನ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಸದ್ಯ ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ. ಬೀದರ್ ರೋಗಿಗಳ ಬಗ್ಗೆ ಡಾ.ವಿಪಿನ್ ವಿಶೇಷ ಕಾಳಜಿ ವಹಿಸಿ ಸಹಕರಿಸುತ್ತಾರೆ ಎನ್ನುತ್ತಾರೆ ಪುತ್ರ ರಾಘವೇಂದ್ರ.