

ಕನಕಗಿರಿ: ಆಡಳಿತದ ಅವಧಿ ಇನ್ನೂ ಮೂರು ವರ್ಷವಿದೆ. ಒಂದೂವರೆ ವರ್ಷದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ನಾನೇ ಉದ್ಘಾಟನೆ ಮಾಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಭಾನುವಾರ ನೆರವೇರಿಸಿ ಮಾತನಾಡಿದರು. 2018ರಲ್ಲಿ ಕನಕಗಿರಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ ಬಳಿಕ ನನ್ನ ಆಡಳಿತದ ಅವಧಿಯಲ್ಲಿಯೇ ಪ್ರಜಾಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆಡಳಿತದ ಅವಧಿಯಲ್ಲಿ ತಾಲೂಕು, ಆಡಳಿತ ಕಚೇರಿಗೆ ಭೂಮಿಪೂಜೆ, ಉದ್ಘಾಟನೆ ಮೂಲಕ ಇತಿಹಾಸ ನಿರ್ಮಿಸಲಾಗುವುದು. ಪ್ರಜಾಸೌಧ ನಿರ್ಮಾಣದ ಜವಾಬ್ದಾರಿಯನ್ನು ಗೃಹ ಮಂಡಳಿಗೆ ವಹಿಸಲಾಗಿದೆ ಎಂದರು.
ಜೂ.2ರಂದು ನೂರು ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ತೋಟಗಾರಿಕೆ ಪಾರ್ಕ್‌ಗೆ ಮುಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುದಾನ ಮೀಸಲಿರಿಸಿ ಅಭಿವೃದ್ಧಿಗೆ ಮಾಡಲಾಗುವುದು ಎಂದು ಹೇಳಿದರು.
ಸಿಸಿ ರಸ್ತೆಗೆ ಚಾಲನೆ: 40 ಲಕ್ಷ ರೂ. ವೆಚ್ಚದಲ್ಲಿ ಹುಲಿಹೈದರ ಗ್ರಾಮದ ಎಸ್ಟಿ ಕಾಲನಿಯಲ್ಲಿ ಸಿಸಿ ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿಯಲ್ಲಿ ಸಿಸಿ ರಸ್ತೆಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪ್ರಮುಖರಾದ ಸಿ ್ದಪ್ಪ ನಿರ್ಲೂಟಿ, ಅನಿಲ ಬಿಜ್ಜಳ, ಹನುಮೇಶ ಹುಳ್ಕಿಹಾಳ, ಹೊನ್ನೂರು ಉಪ್ಪು, ಅಮರಪ್ಪ ಗದ್ದಿ, ವೆಂಕಟೇಶ ಗೋಡಿನಾಳ ಇತರರಿದ್ದರು.
ಕ್ರಸ್ಟ್‌ಗೇಟ್ ನಿರ್ಮಾಣಕ್ಕೆ ರಾಜ್ಯದ ಪಾಲು ನೀಡಲು ಸಿದ್ಧ
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನುಳಿದ 32 ಗೇಟ್‌ಗಳ ಹಂತ ಹಂತವಾಗಿ ಅಳವಡಿಸಲು ರಾಜ್ಯ ಸರ್ಕಾರ ಶೇ.65 ಪಾಲನ್ನು ನೀಡಲು ಸಿದ್ಧವಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಸಮಾನಾಂತರ ಜಲಾಶಯ ದೊಡ್ಡ ಯೋಜನೆಯಾಗಿದೆ. ಐದಾರು ವರ್ಷಗಳಲ್ಲಿ ಮುಗಿಯುವುದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಡಿಪಿಆರ್ ಸಿದ್ಧಪಡಿಸಿತ್ತು. ಆದರೆ, ಜಲಾಶಯದ ಬದಲು ಜಲಾಶಯಗಳು ನಿರ್ಮಾಣವಾದರೆ ಹಲವು ಕೆರೆಗಳು ತುಂಬಿ ಅನುಕೂಲವಾಗಲಿದೆ. ಅದಕ್ಕಾಗಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಕರೊನಾ ಆರಂಭಗೊಂಡಿದ್ದು, ಅಲ್ಲಲ್ಲಿ ಕೆಲವರಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಜಿಲ್ಲಾ ಹಂತದಲ್ಲಿ ಸಭೆ ನಡೆಸಲಾಗುವುದು. ಆದರೆ, ಜನತೆ ಕರೊನಾಕ್ಕೆ ಭಯಪಡಬಾರದು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.