

ರಾಣೆಬೆನ್ನೂರ: ನಗರದಲ್ಲಿ ಜರುಗಿದ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡ 32 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇಲ್ಲಿಯ ಮಾರುತಿ ನಗರದಲ್ಲಿರುವ ಪರಸ್ಪರ ಬಂಧುಗಳಾಗಿರುವ 32 ಜನರಿಗೆ ಸೋಂಕು ದೃಢಪಟ್ಟಿದ್ದು, ಸ್ಥಳಕ್ಕೆ ಆರೋಗ್ಯಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಸಂಪೂರ್ಣ ಏರಿಯಾವನ್ನು ಸೀಲ್ಡೌನ್ ಮಾಡಿದ್ದಾರೆ. ಸುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಿದ್ದಾರೆ.
ಜೂನ್ 29ರಂದು ಮಾರುತಿ ನಗರದ 55 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮಗನ ಮದುವೆಯನ್ನು ಮನೆಗೆ ಸಮೀಪದ ಸಭಾಭವನವೊಂದರಲ್ಲಿ ಮಾಡಿದ್ದರು. ಅದೇ ದಿನ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕರೊನಾ ಸೋಂಕು ದೃಢಪಟ್ಟಿತ್ತು. ಜುಲೈ 7ರಂದು ಚಿಕಿತ್ಸೆ ಫಲಕಾರಿಯಾಗದೆ ದಾವಣಗೆರೆಯಲ್ಲಿ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಪ್ರಥಮ ಸಂಪರ್ಕದಲ್ಲಿದ್ದ ಒಂದೇ ಕುಟುಂಬದ 38 ಜನರನ್ನು ಅಂತರವಳ್ಳಿ ರಸ್ತೆಯಲ್ಲಿ ಸರ್ಕಾರಿ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಿ, ಎಲ್ಲರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 32 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನೂ 6 ಜನರ ವರದಿ ಬರುವುದು ಬಾಕಿ ಇದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ವರನ ತಂದೆ ಜು. 7ರಂದು ಮೃತಪಟ್ಟಿದರೆ, 48 ವರ್ಷದ ತಾಯಿ ಜು. 11ರಂದು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜು. 16ರವರೆಗೆ ತಾಲೂಕಿನಲ್ಲಿ 35 ಪ್ರಕರಣ ಪಾಸಿಟಿವ್ ಬಂದಿದ್ದರೆ, ಶುಕ್ರವಾರ ಒಂದೇ ದಿನ 32 ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಹುಟ್ಟಿಸಿದೆ.
ಪರೀಕ್ಷಾ ವರದಿ ಬರಲು ಹತ್ತು ದಿನ ಬೇಕಾಯ್ತು!
ಕರೊನಾ ಸೋಂಕಿನಿಂದ ಮೃತಪಟ್ಟ ಮಾರುತಿ ನಗರದ 55 ವರ್ಷದ ವ್ಯಕ್ತಿಯ ಪ್ರಥಮ ಸಂಪರ್ಕದಲ್ಲಿದ್ದ 38 ಜನರನ್ನು ಕ್ವಾರಂಟೈನ್ಗೆ ಒಳಪಡಿಸಿದ ಆರೋಗ್ಯಾಧಿಕಾರಿಗಳು ಅದೇ ದಿನ ಎಲ್ಲರ ಗಂಟಲ ದ್ರವ ಮಾದರಿ ಪಡೆದು ಪರೀಕ್ಷೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಿದ್ದರು. ಅಲ್ಲಿಂದ ಜು. 16ರಂದು ವರದಿ ಬಂದಿದೆ. ಆದರೆ, ವರದಿ ಬರುವ ಮುನ್ನವೇ ಕ್ವಾರಂಟೈನ್ನಲ್ಲಿದ್ದವರನ್ನು ಹೊರಗಡೆ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ಅವರನ್ನು ಸಂರ್ಪಸಿದಾಗ, ‘ಕೋವಿಡ್-19 ಹೊಸ ನಿಯಮದ ಪ್ರಕಾರ ಕ್ವಾರಂಟೈನ್ನಲ್ಲಿದ್ದವರನ್ನು ಹತ್ತು ದಿನಕ್ಕೆ ವಾಪಸ್ ಮನೆಗೆ ಕಳುಹಿಸಬೇಕು. ಆದ್ದರಿಂದ ಮಾರುತಿ ನಗರದ ಕ್ವಾರಂಟೈನ್ ಜನರನ್ನು ಮನೆಗೆ ಕಳುಹಿಸಿದ್ದೇವು. ಅವರ ವರದಿ ಪಾಸಿಟಿವ್ ಬಂದ ಕೂಡಲೆ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ವಾರಂಟೈನಲ್ಲಿದ್ದವರ ಲ್ಯಾಬ್ ವರದಿ ಸಹ ತಡವಾಗಿ ಬರುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇವೆ. ನಮ್ಮಲ್ಲಿ ದಿನಕ್ಕೆ 500ರಷ್ಟು ಸ್ವ್ಯಾಬ್ ತೆಗೆದರೆ, 100ರಷ್ಟು ಮಾತ್ರ ಪರೀಕ್ಷೆ ನಡೆಸಲು ಆಗುತ್ತಿದೆ. ಆದ್ದರಿಂದ ಇದನ್ನು ಆದಷ್ಟು ಬೇಗ ಸರಿಪಡಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದರು.
ಮಧ್ಯಾಹ್ನ ಮನೆಗೆ, ರಾತ್ರಿ ಮತ್ತೆ ಆಸ್ಪತ್ರೆಗೆ
ಜು. 7ರಂದು 38 ಜನರನ್ನು ಕ್ವಾರಂಟೈನಲ್ಲಿಟ್ಟಿದ್ದ ಆರೋಗ್ಯಾಧಿಕಾರಿಗಳು ಜು. 16ರಂದು ಮಧ್ಯಾಹ್ನ 3 ಗಂಟೆಗೆ ಕ್ವಾರಂಟೈನ್ ಕೇಂದ್ರದಿಂದ ಎಲ್ಲರನ್ನೂ ಮನೆಗೆ ಕಳುಹಿಸಿದ್ದರು. ಆದರೆ, ರಾತ್ರಿ ವೇಳೆಗೆ 32 ಜನರ ವರದಿ ಪಾಸಿಟಿವ್ ಬಂದಿರುವ ಕುರಿತು ವೈದ್ಯಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಮತ್ತೆ ರಾತ್ರೋರಾತ್ರಿ ಎಲ್ಲರನ್ನೂ ತಾಲೂಕು ಕೋವಿಡ್ ಆಸ್ಪತ್ರೆಗೆ ಸೇರಿಸಿದ್ದಾರೆ. ಅಷ್ಟರಲ್ಲಿ ಸೋಂಕಿತರು ನಗರದ ತರಕಾರಿ, ದಿನಸಿ ಅಂಗಡಿಗಳ ಮಾರುಕಟ್ಟೆಗೆ ತೆರಳಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತಂದಿದ್ದಾರೆ. ಕೆಲವರು ಹೋಟೆಲ್ ಸೇರಿ ವಿವಿಧ ಸ್ಥಳಗಳಲ್ಲಿ ಓಡಾಡಿ ಆತ್ಮೀಯರನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನಲಾಗಿದೆ. ಈಗ ಅವರಿಗೆಲ್ಲ ಆತಂಕ ಶುರುವಾಗಿದೆ.