

ಹಾಸನ: ಹಾಸನ ನಗರಸಭೆಗೆ ಹಸ್ತಾಂತರವಾಗಿರುವ ವಿವಿಧ ಗ್ರಾಮ ಪಂಚಾಯಿತಿಯ ಗ್ರಾಮಗಳ ಸ್ವತ್ತುಗಳನ್ನು ಒಂದು ವಾರದ ಒಳಗಾಗಿ ಇ- ಖಾತೆ ಮಾಡಿಕೊಡದಿದ್ದರೆ ನಗರಸಭೆ ಮುಂದೆ ಧರಣಿ ನಡೆಸಲಾಗುವುದು ಎಂದು ತಮ್ಲಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಮ್ಲಪುರ ಗಣೇಶ್ ಎಚ್ಚರಿಕೆ ನೀಡಿದರು.
ಹಾಸನ ತಾಲೂಕಿನ ಹಿಂದಿನ ಎಲ್ಲಾ ಗ್ರಾಮದ ಸ್ವತ್ತುಗಳು ಮಂಡಲ ಪಂಚಾಯಿತಿಯಲ್ಲಿ ಖಾತೆಯಾಗಿ ನಂತರ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿ ಖಾತೆಯಾಗಿವೆ. ಪಂಚಾಯತ್ ರಾಜ್ ಆದೇಶದಂತೆ ಸ್ವತ್ತುಗಳು ಅಲಿನೇಷನ್ ಆಗಿದ್ದು, ಅದರಂತೆ ಇ-ಖಾತೆ ಮಾಡಿದ್ದಾರೆ. ಈಗ 9 ಗ್ರಾಮ ಪಂಚಾಯಿತಿಯ 25 ಹಳ್ಳಿಗಳು ಹಾಸನ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾಧಿಕಾರಿಗಳು ಲೇಔಟ್ ಆಗದಿರುವ ಸ್ವತ್ತುಗಳನ್ನು ಇ- ಖಾತೆ ಮಾಡಬಾರದು ಎಂದು ಹಾಸನ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಖಾತೆದಾರರು ನಗರಸಭೆಗೆ ಸುತ್ತಿ ಸುತ್ತಿ ಹತಾಶರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ದಯವಿಟ್ಟು ಹಾಸನ ಜನತೆಗೆ ಇಂದಿನ ಗ್ರಾಮ ಪಂಚಾಯಿತಿಯ ಇ ಸ್ವತ್ತಿನಂತೆ ಕಂದಾಯ ಮುಂದುವರೆಸಲು ಹಾಗೂ ಸ್ವತ್ತುಗಳ ಇ-ಖಾತೆ ಮಾಡಿಕೊಡಲು ಈ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ನಾಗರಾಜು, ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.