

ಹಾಸನ: ಹಾಸನ ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತ ಪಡೆಯುವುದು ನಿಶ್ಚಿತ. ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಎರಡನೇ ಸ್ಥಾನಕ್ಕಾಗಿ ಫೈಟ್ ಮಾಡಲಿ ಎಂದು ಶಾಸಕ ಹಾಗೂ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಮತ್ತೊಮ್ಮೆ ತಾವೇ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಶುಕ್ರವಾರ ಹಾಸನ ಜನರು ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿಯಿಂದ ಕೂಡ ಅಭ್ಯರ್ಥಿ ಇರುತ್ತಾರೆ. ಆದರೆ ಜೆಡಿಎಸ್ ನನ್ನ ನೈಜ ಎದುರಾಳಿ, ಉಳಿದ ಮೂರು ಪಕ್ಷಗಳು 2ನೇ ಸ್ಥಾನಕ್ಕೆ ಹೋರಾಟ ಮಾಡುತ್ತವೆ ಆದರೆ ನಾನು ರಾಜಕೀಯ ಎದುರಾಳಿಗಳ ಬಗ್ಗೆ ಕೇವಲವಾಗಿ ಮಾತನಾಡುವ ವ್ಯಕ್ತಿತ್ವ ನನ್ನದಲ್ಲ ಎಂದರು.
ಶಕ್ತಿಯುತವಾಗಿ ಕೆಲಸ ಮಾಡಲು ಸಾಧ್ಯವಾಗಬೇಕಾದರೆ ಆರ್ಮಿ ಚನ್ನಾಗಿರಬೇಕು. ಆಗ ಮಾತ್ರ ಲೆಫ್ಟಿನೆಚಿಟ್ ಚೀಫ್ ಆಗಲು ಸಾಧ್ಯ. ಕ್ಷೇತ್ರದ 276 ಬೂತ್‌ಗಳಲ್ಲಿ ಯಾರನ್ನು ಪ್ರತಿನಿಧಿ ಮಾಡಬೇಕು ಎಂಬ ಕಲ್ಪನೆಯೇ ಇಲ್ಲದವರು ಟಿಕೆಟ್‌ಗೆ ಹೋರಾಟ ಮಾಡುತ್ತಿರುತ್ತಾರೆ. ಬಿಜೆಪಿ ಕಾರ್ಯಕರ್ತರನ್ನು ಕೇಳಿದರೂ ಸ್ವರೂಪ್‌ಗೆ ಜೆಡಿಎಸ್‌ನಿಂದ ಟಿಕೆಟ್ ಕೊಟ್ಟರೆ ಒಳ್ಳೆಯದು ಎಂಬ ಅಭಿಪ್ರಾಯ ಬಂದಿರಬಹುದು. ಯಾವ ಕಾರಣಕ್ಕೆ ಹೇಳಿರುತತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಸ್ವರೂಪ್ ಅವರ ತಂದೆ 25 ವರ್ಷ ಶಾಸಕರಾಗಿ, ಅವರ ಚಿಕ್ಕಪ್ಪನಿಗೆ ನಗರಸಭೆ ಅಧ್ಯಕ್ಷರಾಗಿ ಅವಕಾಶ ಮಾಡಿಕೊಟ್ಟಿದ್ದರು. ಸ್ವರೂಪ್ ಸಹ ಜಿಪಂ ಸದಸ್ಯರಾಗಿದ್ದವರು. ಆದರೆ ಅಷ್ಟೂ ಅವಧಿಯಲ್ಲಿ ಮಾಡಲಾಗದ 10 ಪಟ್ಟು ಕೆಲಸಗಳನ್ನು ಕೇವಲ ಐದು ವರ್ಷಗಳಲ್ಲಿ ನಾನು ಮಾಡಿ ತೊರಿಸಿದ್ದೇನೆ. ಸ್ವತಂತ್ರವಾಗಿ ಕೆಲಸ ಮಾಡುವ ಶಕ್ತಿ ಬಿಜೆಪಿ ನೀಡಿದ್ದೇ ಇದಕ್ಕೆ ಕಾರಣ ಜೆಡಿಎಸ್‌ನಲ್ಲಿ ಅಂತಹ ವಾತಾವರಣಗಳಿಲ್ಲ ಎಂದು ಲೇವಡಿ ಮಾಡಿದರು.
ಗ್ರಾಮ ಲೆಕ್ಕಿಗನಿಂದ ಸಣ್ಣ ಕೆಲಸ ಮಾಡಿಕೊಳ್ಳಬೇಕಾದರೂ ಹೊಳೆನರಸೀಪುರದ ಕಡೆಗೆ ತಿರುಗಿ ನೋಡುವ ವಾತಾವರಣವಿದೆ. ಅಂತಹ ವ್ಯಕ್ತಿಯನ್ನು ಗೆಲ್ಲಿಸಿಕೊಂಡರೆ ಏನು ಪ್ರಯೋಜನ ಎಂದು ಕಾರ್ಯಕರ್ತರು, ಸಾರ್ವಜನಿಕರು ಯೋಚನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ 5 ವರ್ಷಗಳಲ್ಲಿ ಶೇ.50 ರಷ್ಟು ಕಾರ್ಯಕರ್ತರು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಎಲ್ಲರನ್ನೂ ಉಳಿಸಿಕೊಳ್ಳುವ ನಾಯಕ ಎಂದು ನಂಬಿದ ಜನರು ನನ್ನ ಜತೆಗಿದ್ದಾರೆ ಎಂದರು.
ಜೆಡಿಎಸ್‌ನಿಂದ ಎಚ್.ಪಿ.ಸ್ವರೂಪ್ ಅವರೇ ಅಭ್ಯರ್ಥಿ ಆಗಬೇಕು ಎಂದು ಹೋರಾಟ ಮಾಡಿದವರು ನನ್ನ ಹಿತೈಷಿಗಳೆಂದು ಭಾವಿಸಿದ್ದು ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಹೇಮಾವತಿ ನಗರದಲ್ಲಿ ಲೀಡ್ ಪಡೆಯಲಿ:
ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ಅವರು ಗೆಲ್ಲುವ ಮಾತಿರಲಿ, ಅವರ ನಿವಾಸವಿರುವ ಹೇಮಾವತಿ ನಗರದ ಬೂತ್‌ನಲ್ಲಿ ಲೀಡ್ ಪಡೆಯಲಿ ನೋಡೋಣ ಎಂದು ಪ್ರೀತಂ ಜೆ.ಗೌಡ ಅವರು ಸವಾಲು ಹಾಕಿದರು.
ಕಳೆದ ವಿಧಾನಸಭೆ, ಲೋಕಸಭೆ, ನಗರಸಭೆ ಚುನಾವಣೆಯಲ್ಲಿ ಆ ಬಡಾವಣೆ ಜನರು ನಮ್ಮ ಪಕ್ಷಕ್ಕೆ ಲೀಡ್ ಕೊಟ್ಟಿದ್ದಾರೆ. ಊಗಲೂ ಹೇಮಾವತಿ ನಗರದ ಜನರು ನನ್ನ ಜತೆಗಿದ್ದಾರೆ. ಆ ಭಾಗದಿಂದ ಅಭ್ಯರ್ಥಿ ಆಗಿರುವವರು ತಮ್ಮ ಬಡಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯಬೇಕಿದೆ. ನಂತರ ಉಳಿದ ಬೂತ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ಸುಮ್ಮನೆ ಕಪೋಕಲ್ಪಿತವಾಗಿ ಆಲೋಚನೆ ಮಾಡಿಕೊಳ್ಳುವುದು ಸರಿಯಲ್ಲ. ಮುಸಲ್ಮಾನದ ಶೇ.51 ರಷ್ಟು ಮತಗಳು ಈ ಬಾರಿ ಬಿಜೆಪಿ ಬೀಳಲಿವೆ. ದಶಕಗಳಿಂದ ಆ ಪಕ್ಷದವರು ಮಾಡಲಾದ ಕೆಲಸಗಳನ್ನು ನಾನು ಮಾಡಿದ್ದರಿಂದ ಅತೀ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಎಚ್.ಡಿ.ಆರ್‌ಗೆ ಪ್ರೀತಂ ಟಾಂಗ್
ಹಾಸನ ಲೂಟಿಯಾಗಿದೆ ಎಂಬ ಎಚ್.ಡಿ. ರೇವಣ್ಣ ಅವರು ಹೇಳಿಕೆ ವಿಚಾರ ಕುರಿತು ಮಾತನಾಡಿದ ಪ್ರೀತಂಗೌಡ ಅವರು, ಹೌದು ನಾನು ಕ್ಷೇತ್ರದ ಜನರ ಪ್ರೀತಿಯನ್ನು ಲೂಟಿ ಮಾಡಿದ್ದೇನೆ. ಜನರ ಪ್ರೀತಿ ಲೂಟಿ ಮಾಡಿದ್ದಕ್ಕೆ ನಿನ್ನೆ ಅಷ್ಟೊಂದು ಜನ ಸೇರಿದ್ದು. ಸ್ವರೂಪ್ ಟಿಕೆಟ್ ಪಡೆಯುವುದಕ್ಕೆ ಎಷ್ಟೊಂದು ಪರದಾಡಿದರು. ಇನ್ನು ಅವರು ಏನು ಕೆಲಸ ಮಾಡುತ್ತಾರೆ ಎಂದು ಜನ ಯೋಚನೆ ಮಾಡುತ್ತಾರೆ. ಒಂದು ಪತ್ರ ಕೊಡುವುದಕ್ಕೂ ಹೊಳೆನರಸೀಪುರದ ಅನುಮತಿ ಬೇಕು. ಹಾಗಾಗಿ ಹಾಸನದ ಜನರು ಕೆಲಸಗಾರನಿಗೆ ಅವಕಾಶ ಕೊಡುತ್ತಾರೆ ಎಂದು ರೇವಣ್ಣಗೆ ಟಾಂಗ್ ನೀಡಿದ್ದಾರೆ.