

ವಿಜಯವಾಣಿ ಸುದ್ದಿಜಾಲ ತೂಬಗೆರೆ
ನೂರು ವರ್ಷ ಬಾಳಿದ ಒಂದು ಮರ ಭೂಮಿಗೆ ಬಿದ್ದರೆ ಮತ್ತೆ ನೂರು ವರ್ಷ ಕೆಲಸಕ್ಕೆ ಬರುತ್ತದೆ. ಮರದಿಂದ ಕಿಟಕಿ, ಬಾಗಿಲು, ಮಂಚ ಇನ್ನೂ ಮುಂತಾದ ವಸ್ತುಗಳನ್ನಾಗಿ ಮನುಷ್ಯ ಬಳಕೆ ಮಾಡಿಕೊಳ್ಳುತ್ತಾನೆ ಎಂದು ಕೋಡಿಮಠ ಮಹಾಸಂಸ್ಥಾನದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರಸ್ವಾಮೀಜಿ ಹೇಳಿದರು.
ಹೋಬಳಿ ಗಂಟಿಗಾನಹಳ್ಳಿಯ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ದೇವಾಲಯ ಶುದ್ಧವಾಗಿದ್ದರೆ ಮನುಷ್ಯನ ಮನಸ್ಸು ಶುದ್ಧವಾಗಿರುತ್ತದೆ. ನಮ್ಮನ್ನು ನಾವು ತಿದ್ದಕೊಳ್ಳಲು, ನಮ್ಮ ಜೀವನ ರೂಪಿಸಿಕೊಳ್ಳುವುದಕ್ಕಾಗಿ ದೇವಾಲಯದ ಕಲ್ಪನೆ ಬೇಕು. ದೇವಾಲಯದ ಅವಶ್ಯಕತೆ ಇದ್ದಾಗ ಹಾಗೂ ಬದುಕುವುದಕ್ಕಾಗಿ ದೇವಾಲಯಗಳನ್ನು ಕಟ್ಟಿಸಿಕೊಳ್ಳುತ್ತೇವೆ. ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಯಾವುದಾದರೂ ಕೆಲಸ ಮಾಡುತ್ತಿದ್ದಾನೆ. ಎಷ್ಟೇ ಪ್ರಯತ್ನಪಟ್ಟರೂ ಮನುಷ್ಯನಿಂದ ಯಾವುದೇ ಲಾಭ ಆಗುವುದಿಲ್ಲ. ಆದರೆ, ಒಂದು ಮರ ಬೆಳೆಸಿ ಉಳಿಸಿದರೆ ಅದು ನೂರಾರು ಮಕ್ಕಳಿಗೆ ಆಶ್ರಯವಾಗುತ್ತದೆ. ಅದರಂತೆ ದೇವಾಲಯಗಳನ್ನು ಕಟ್ಟಿಸಿದರೆ ದೇವಾಲಯಗಳಲ್ಲಿ ದೇವರನ್ನು ನಾನಾ ರೀತಿಯಲ್ಲಿ ಕಾಣಬಹುದಾಗಿದೆ ಎಂದರು. ತೆಂಗು-ನಾರು ಸಹಕಾರ ಮಂಡಳಿ ಅಧ್ಯಕ್ಷ ಬಾಬು ಮಾತನಾಡಿ, ಗ್ರಾಮದಲ್ಲಿ ಸುಮಾರು ವರ್ಷಗಳಿಂದ ದೇಗುಲ ನಿರ್ಮಿಸಬೇಕೆಂಬ ಆಸೆ ಹೊಂದಲಾಗಿತ್ತು. ಇದೀಗ ಶ್ರೀ ಲಕ್ಷ್ಮೀ ರಂಗನಾಥ ದೇವಾಲಯ ಪೂರ್ಣಗೊಂಡು ಪ್ರತಿಷ್ಠಾಪನೆ ನೆರವೇರಿಸಲಾಗಿದೆ ಎಂದರು.
ಕಳಸ ಸ್ಥಾಪನೆ ಪೂಜಾ ಕಾರ್ಯಕ್ಕೆ ಚಾಲನೆ
ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಳಸ ಸ್ಥಾಪನೆ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಎರಡು ದಿನ ನಡೆದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗಂಗೆಪೂಜೆ, ಗೋಪೂಜೆ, ಪುಣ್ಯಾಹ, ದೇವನಾಂದಿ, ನವಗ್ರಹ ಪೂಜೆ, ಕಳಶ ಪೂಜೆ ಪ್ರಾಣ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ ಕಾರ್ಯಗಳನ್ನು ನೆರವೇರಿಸಲಾಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು, ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಜಿ.ಎ. ರಂಗಪ್ಪ, ಜಿಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ, ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎಸ್.ಕೆ ಗೋವಿಂದರಾಜು, ಪದಾಧಿಕಾರಿಗಳು ಹಾಗೂ ಸುಣಘಟ್ಟ, ಕಣ್ಣೂರಹಳ್ಳಿ, ಗಂಟಿಗಾನಹಳ್ಳಿ ಗ್ರಾಮಸ್ಥರು ಇದ್ದರು.