

ಹಾಸನ: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಪೊಲೀಸ್ ವಿಚಾರಣೆಯಲ್ಲಿದ್ದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಅವರನ್ನು ಪೆನ್‌ಡ್ರೈವ್ ಕೇಸ್‌ನ ವಿಚಾರವಾಗಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹೊಳೆನರಸೀಪುರ ಪೊಲೀಸರ ಕಸ್ಟಡಿಯಿಂದ ದೇವರಾಜೇಗೌಡ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಸೂಚಿಸಲಾಗಿತ್ತು. ಆದರೆ ಬೇರೆ ಪ್ರಕರಣದ ವಿಚಾರಣೆಗೆ ಎಸ್‌ಐಟಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರಿಂದ 5ನೇ ಅಧಿಕ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪೆನ್‌ಡ್ರೈವ್ ವೈರಲ್ ಪ್ರಕರಣದಲ್ಲಿ 8 ಆರೋಪಿಯಾಗಿ ದೇವರಾಜೇಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಿಸಿಕೊಂಡ ಬಳಿಕ ಎಸ್‌ಐಟಿ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಿತ್ತು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯದ ಒಂದು ದಿನ ಎಸ್ ಐಟಿ ಕಸ್ಟಡಿಗೆ ನೀಡಿದೆ.
ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರ ಜೊತೆ ದೇವರಾಜೇಗೌಡ ಮಾತನಾಡಿ, ಕಾಂಗ್ರೆಸ್‌ನ ನಾಯಕರು ಹೇಳಿದ ಹಾಗೆ ನಾನು ಕೇಳಲಿಲ್ಲ ಎಂಬ ಕಾರಣಕ್ಕೆ ಮೊದಲಿಗೆ ಜಾತಿ ನಿಂದನೆ ಪ್ರಕರಣ ದಾಖಲಿಸಿದರು. ಅದರಲ್ಲಿ ಸಾಕ್ಷಿಗಳು ಸಿಗದ ಹಿನ್ನಲೆ ವಂಚನೆ ಕೇಸ್ ಹಾಕಿಸಿದರು. ಅಲ್ಲಿಯೂ ನನ್ನ ಬಂಧಿಸಲು ಸಾಧ್ಯವಾಗದ ಕಾರಣಕ್ಕೆ ಅತ್ಯಾಚಾರ ಕೇಸ್ ದಾಖಲಾಗುವಂತೆ ನೋಡಿಕೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನನ್ನ ವಿರುದ್ದ ಡಿಕೆಶಿ ಹಗೆತನ ಸಾಧಿಸುತ್ತಿದ್ದು, ಆ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವ ವರೆಗೆ ನಾನು ವಿರಮಿಸುವುದಿಲ್ಲ ಎಂದು ವಕೀಲ ಜಿ.ದೇವರಾಜೇಗೌಡ ಪ್ರತಿಜ್ಞೆ ಮಾಡಿದರು.
ಪೆನ್‌ಡ್ರೈವ್ ಹಂಚಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿಸಿದ್ದಾರೆಂದು ಹೇಳಿಕೆ ನೀಡಿದರೆ ಏನೂ ಸಮಸ್ಯೆಯಾಗಲ್ಲ. ನಿನ್ನನ್ನು ಕಾನೂನಿಂದ ರಕ್ಷಣೆ ಮಾಡುತ್ತೇನೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನಗೆ ಆಮಿಷವೊಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿದರು.
ಡಿ.ಕೆ.ಶಿವಕುಮಾರ್ ಅವರು ನನ್ನೊಟ್ಟಿಗೆ ಮಾತನಾಡಿರುವ ಆಡಿಯೊ ಇದೆ. ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಜೈಲಿನಿಂದ ಹೊರಗಡೆ ಬಂದ ದಿನವೇ ರಾಜ್ಯ ಸರ್ಕಾರ ಪತನವಾಗಲಿದೆ. ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ನನ್ನ ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ನನ್ನ ಹತ್ತಿರ ಇರುವ ಸಾಕ್ಷಿ ಎಲ್ಲೋ ಇದೆ. ಸಾಕ್ಷಾೃಧಾರಗಳನ್ನ ಸುರಕ್ಷಿತವಾಗಿಟ್ಟಿದ್ದೇನೆ ಎಂದು ಹೇಳಿದರು.
ಪೆನ್‌ಡ್ರೈವ್ ಪ್ರಕರಣದ ರೂವಾರಿ ಎಚ್.ಡಿ.ಕುಮಾರಸ್ವಾಮಿ ಅಂತ ಹೇಳಬೇಕು. ಕಾನೂನಿನಿಂದ ರಕ್ಷಿಸುತ್ತೇನೆಂದು ಡಿ.ಕೆ.ಶಿವಕುಮಾರ್ ನನಗೆ ಹಣದ ಆಫರ್ ನೀಡಿದ್ದರು. ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ತಯಾರಿಸಿದ್ದೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದರು.
ಜೆಡಿಎಸ್‌ಗೆ ಕೆಟ್ಟ ಹೆಸರು ತರಬೇಕೆಂದು ಕಾದು ಕುಳಿತಿದ್ದ ಡಿ.ಕೆ.ಶಿವಕುಮಾರ್ ಅವರು ಲೋಕಸಭೆ ಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಂಡರು. ಇದಕ್ಕಾಗಿ ನಾಲ್ಕು ಜನ ಸಚಿವರ ಸಮಿತಿ ರಚಿಸಿದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮತ್ತು ಇನ್ನೊಬ್ಬ ಸಚಿವರನ್ನು ನೇಮಿಸಿ ಪೆನ್‌ಡ್ರೈವ್ ಪ್ರಕರಣದ ಉಸ್ತುವಾರಿ ನೋಡಿಕೊಳ್ಳಲು ಹೇಳಿದ್ದರು.
ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ನಾನು ಒಪ್ಪದೇ ಇದ್ದಾಗ ಪ್ರಧಾನಿ ಮೋದಿ, ಬಿಜೆಪಿಗೆ ಹಾಗು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದರು. ನನಗೆ ಸುಮಾರು ನೂರು ಕೋಟಿ ಆಫರ್ ನೀಡಿದ್ದರು. ಮುಂಗಡವಾಗಿ 5 ಕೋಟಿ ರೂ.ಗಳನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮೂಲಕ ಬೆಂಗಳೂರಿನ ಬೌರಿಂಗ್ ಕ್ಲಬ್‌ಗೆ ಕಳುಹಿಸಿಕೊಟ್ಟಿದ್ದರು ಎಂದರು.
ಎಸ್‌ಐಟಿ ಅಧಿಕಾರಿಗಳು ಈಗಾಗಲೇ ನನ್ನ ಬಳಿಯಿದ್ದ ಪೆನ್‌ಡ್ರೈವ್ ಸೀಜ್ ಮಾಡಿದ್ದಾರೆ. ಅದು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದ ವಿಡಿಯೋಗಳ ಪೆನ್‌ಡ್ರೈವ್ ಅಲ್ಲ. ಕಾರು ಚಾಲಕ ಕಾರ್ತಿಕ್ ಹೆಂಡತಿಯ ಅಪಹರಣಕ್ಕೆ ಸಂಬಂಧಿಸಿದ ವಿಡಿಯೋ ಅದರಲ್ಲಿದೆ. ಕಾಂಗ್ರೆಸ್‌ನವರು ಬಯಸಿದ್ದ ಪೆನ್‌ಡ್ರೈವ್ ಸಿಗದೆ ಇರುವ ಕಾರಣಕ್ಕೆ ಈ ಪೆನ್‌ಡ್ರೈವ್ ಇಟ್ಟುಕೊಂಡು ನನ್ನನ್ನು ಶಿಕ್ಷಿಸಲು ಹೊರಟಿದ್ದಾರೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸಹ ಇದರಲ್ಲಿ ಮಧ್ಯಸ್ಥಿಕೆ ವಹಿಸಿದ್ದು ನನಗೆ 100 ಕೋಟಿ ರೂ. ಆಫರ್ ಮಾಡಿದ್ದ. ಡಿ.ಕೆ.ಶಿವಕುಮಾರ್ ನೇರವಾಗಿ ನನ್ನ ಬಳಿ ಈ ವಿಚಾರವಾಗಿ ಮಾತನಾಡಿಲ್ಲ. ಜೈಲಿನಿಂದ ಬಿಡುಗಡೆಯಾದ ಬಳಿಕ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.