ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ

31 Madhugiri 02 - KNR
Published on

ಮಧುಗಿರಿ : ನಾನು ಯಾವುದೇ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ನನ್ನದು ಬಡವರ ಜಾತಿ. ಕ್ಷೇತ್ರವೇ ನನ್ನ ಮನೆ ಎಂದು ಭಾವಿಸಿದ್ದೇನೆ ಎಂದು ಮಾಜಿ ಶಾಸಕರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲೂಕಿನ ಐಡಿಹಳ್ಳಿ ಹೋಬಳಿಯ ದೊಡ್ಡಯಲ್ಕೂರು ಗ್ರಾಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸರ್ವ ಜನಾಂಗದ ದಾರ್ಶನಿಕ ಮಹಾನೀಯರ ಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದ ಅವಧಿಯಲ್ಲಿ 16 ಸಾವಿರ ಮನೆಗಳನ್ನು ನಿರ್ಮಿಸಿದ್ದೆ. ತಾಲೂಕಿನ ಮತದಾರರು ಹಿಂದಿನ ಘಟನೆಗಳನ್ನು ಮರೆತು ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದದರು.

ನಾನು ಈ ಭಾರಿ ಶಾಸಕನಾಗಿ ಆಯ್ಕೆಯಾಗಿದ್ದರೆ ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆಯಡಿಯಲ್ಲಿ ನೀರು ಹರಿಸುತ್ತಿದೆ. ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿಸಿ, ಬೆಟ್ಟಕ್ಕೆ ರೋಪ್‌ವೇ ಅಳವಡಿಸಲು ಕ್ರಮ ಕೈಗೊಳ್ಳುತ್ತಿದೆ ಎಂದರು.

ಸರ್ವ ಜನಾಂಗದ ದಾರ್ಶನಿಕರ ಮಹನೀಯರ ಜಯಂತಿಗಳ ಆಚರಣೆಗಳು ಸಮಾಜಕ್ಕೆ ಉತ್ತಮವಾದ ಸಂದೇಶ ನೀಡುವಂತಹದ್ದು, ಹಾಗಾಗಿ ಮಹನೀಯರ ಕೊಡುಗೆಗಳನ್ನು ಮನದಟ್ಟು ಮಾಡಿಕೊಂಡು ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿ, ರಾಜಣ್ಣ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೋಬಳಿಯಲ್ಲಿ ಕಾಂಗ್ರೆಸ್ ಮತಗಳಿಕೆಯಲ್ಲಿ ಹಿನ್ನಡೆ ಕಂಡಿತ್ತು. ಸೀರೆ, ಹೆಂಡ, ಹಣಕ್ಕೆ ಮಾರು ಹೋಗದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಲಪಡಿಸಿ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ಶ್ರೀಮಂತಿಕೆಯಿಂದ ಯಾರು ಕೂಡ ಮಹನೀಯರಾಗುವುದಿಲ್ಲ. ಅವರ ಶ್ರಮ, ಹೋರಾಟ ಹಾಗೂ ಅವರ ಜೀವನದಲ್ಲಿ ಅಳವಡಿಸಿಕೊಂಡ ತತ್ವಗಳಿಂದ ಅವರು ಮಹನೀಯರಾಗಿದ್ದು, ಅವರ ತತ್ವ ಆದರ್ಶಗಳನ್ನು ಮುಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ವಿಜಯ್ ಕುಮಾರ್ ಜೈನ್, ಎಂ.ಕೆ.ನಂಜುಂಡಯ್ಯ, ಮಧುಗಿರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಮುಖಂಡರಾದ ಯಲ್ಕೂರು ನಾಗಭೂಷಣ್, ಪುಟ್ಟಸಿದ್ದಯ್ಯ, ಅಂಜನಮೂರ್ತಿ, ಶ್ರೀದೇವಿ, ಶ್ರೇಯಸ್, ಚಂದ್ರು, ರವಿಕುಮಾರ್, ಶನಿವಾರಂ ರೆಡ್ಡಿ, ನರಸಿಂಹರೆಡ್ಡಿ, ಸುವರ್ಣಮ್ಮ, ಗೋಪಾಲಯ್ಯ ಇದ್ದರು.

ದೇವೇಗೌಡರನ್ನು ಪ್ರಧಾನಿಯಾಗಿ ಹಾಗೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಅದನ್ನು ಯಾರೂ ಮರೆಯಬಾರದು. ಅಧಿಕಾರ ಉಳಿಸಿಕೊಳ್ಳಲಾಗದವರು ಕಾಂಗ್ರೆಸ್ ಅನ್ನು ಟೀಕಿಸುತ್ತಾರೆ. ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net