

ಕಿಕ್ಕೇರಿ: ಒಂದು ಸುಂದರ ಛಾಯಾಚಿತ್ರ ಹತ್ತಾರು ವಿಷಯಗಳನ್ನು ಹೇಳಬಲ್ಲದು ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತಿಳಿಸಿದರು.
ಇಲ್ಲಿನ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಛಾಯಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಛಾಯಾಗ್ರಾಹಕರಲ್ಲಿ ಸಂಘಟನೆ ಮುಖ್ಯ. ಒಗ್ಗಟ್ಟಿನಿಂದ ಸಂಘ ಬಲವರ್ಧಿಸಿಕೊಳ್ಳಿ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಸಂಘಗಳು ವಿಭಜನೆ ಮಾಡಿಕೊಳ್ಳದಿರಿ. ಛಾಯಾಗ್ರಾಹಕರ ಬದುಕಿಗೆ ಅತ್ಯಾಧುನಿಕ ಮೊಬೈಲ್‌ಗಳು ಪೈಪೋಟಿ ನೀಡುತ್ತಿವೆ. ಹೆಚ್ಚು ಬಂಡವಾಳ ಹೂಡಬೇಕಿದೆ. ಅತ್ಯಾಧುನಿಕ ಕ್ಯಾಮರಾ, ಆಗಿಂದಾಗ್ಗೆ ಹೊಸ ಆವಿಷ್ಕಾರದ ಕ್ಯಾಮರಾಗಳಿಗೆ ತಮ್ಮ ಕಸುಬನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಉತ್ತಮ ಛಾಯಗ್ರಾಹಕನಿಗೆ ಬೆಲೆ ಇದೆ. ಡಿಜಿಟಲ್ ಹಾವಳಿ, ಮೊಬೈಲ್‌ಗಳ ಹಾವಳಿ ಸಣ್ಣಪುಟ್ಟ ವೃತ್ತಿ ಬಾಂಧವರಿಗೆ ದೊಡ್ಡ ಹೊಡೆತವಾಗಿದೆ. ಸಮಾಜದ ಅಂಕುಡೊಂಕು ತಿದ್ದುವ ಪತ್ರಿಕಾ ಮಾಧ್ಯಮದ ನಂಟು ತಮ್ಮಲ್ಲಿದ್ದು ಸಮಾಜಮುಖಿ ಕೆಲಸ ಮಾಡಲು ಮುಂದಾಗಿ. ತಮ್ಮ ವೃತ್ತಿ ಅಸಂಘಟಿತ ಕಾರ್ಮಿಕರ ಕಸುಬಾಗಿದ್ದು ಸರ್ಕಾರದಿಂದ ಸೌಲಭ್ಯ ಪಡೆಯಲು ಅರ್ಹತಾ ಕಾರ್ಡುಗಳನ್ನು ಪಡೆಯಲು ಮುಂದಾಗುವಂತೆ ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಒಂದು ಛಾಯಾಚಿತ್ರ ಇಡೀ ಸಮಾಜವನ್ನೆ ಬದಲಾಯಿಸುವ ಶಕ್ತಿ ಇದೆ. ವೃತ್ತಿಯಲ್ಲಿ ಶ್ರದ್ಧೆ, ಗ್ರಾಹಕರಲ್ಲಿರುವ ಬಾಂಧವ್ಯ ವೃತ್ತಿಗೆ ಆಸರೆಯಾಗಲಿದೆ. ತಾವು ನೀಡುವ ಮಧುರ ಕ್ಷಣಗಳ ಫೋಟೋ ಸದಾ ಎಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಮಾಡಲಿದೆ ಎಂದು ನುಡಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಹೇಮಗಿರಿ ಶಾಖೆಯ ಕಾರ್ಯದರ್ಶಿ ಜೆ.ಎನ್. ರಾಮಕೃಷ್ಣೇಗೌಡ ಮಾತನಾಡಿ, ಪತ್ರಿಕಾ ಮಾಧ್ಯಮ ಹಾಗೂ ಛಾಯಾಗ್ರಾಹಕ ಸಮಾಜದ ಕಣ್ಣುಗಳಿದ್ದಂತೆ ಸಮಾಜದ ತಿದ್ದುವ ಜವಾಬ್ದಾರಿ ನಿಮ್ಮಲ್ಲಿದೆ. ಹೋರಾಟದ ಹಾದಿಯ ವೃತ್ತಿ ನಿಮ್ಮದಾಗಿದೆ. ಪರಸ್ಥಳಕ್ಕೆ ತೆರಳುವಾಗ ಅಪಘಾತದಂತಹ ಅವಘಡಗಳ ಸಂಭವಿಸದಂತೆ ಎಚ್ಚರಿಕೆ ಇರಲಿ. ಕಾರ್ಮಿಕರ ಕಾರ್ಡು ಮಾಡಿಸಿಕೊಳ್ಳಿ. ಇದು ತಮ್ಮ ಕುಟುಂಬಕ್ಕೆ ನೆರವಾಗಲಿದೆ ಎಂದು ತಿಳಿ ಹೇಳಿದರು.
ಸಂಘದ ಎಲ್ಲ ಛಾಯಾಗ್ರಾಹಕರು, ಗಣ್ಯರನ್ನು ಗೌರವಿಸಲಾಯಿತು. ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ್, ಜೆಡಿಎಸ್ ಯುವ ಘಟಕ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಕಡಹೆಮ್ಮಿಗೆ ರಮೇಶ್, ಐನೋರಹಳ್ಳಿ ಮಲ್ಲೇಶ್, ಚಂದ್ರಹಾಸ, ಶ್ರೀಧರ್, ಹಿರಣ್ಣಯ್ಯ, ಜಿ.ಪಿ. ರಾಜು, ಛಾಯಾ ಸಂಘದ ಸದಸ್ಯರು ಮತ್ತಿತರರಿದ್ದರು.