

ವಿಜಯಪುರ: ವಿಜಯಪುರ ಜಿಲ್ಲಾ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ತಂಡ ಯಾರಿಗೂ ಗೊತ್ತಾಗದಂತೆ ಕಬ್ಬಿನ ಗದ್ದೆಯ ಮದ್ಯಭಾಗದಲ್ಲಿ ಅಕ್ರಮವಾಗಿ ಬೆಳೆದಿದ್ದ 100 ಕೇಜಿ ಅಕ್ರಮ ಗಾಂಜಾವನ್ನು ಪತ್ತೆ ಹಚ್ಚಿದೆ. ಇಂಡಿ ತಾಲೂಕಿನ ಮಿರಗಿ ಗ್ರಾಮದ ನಿವಾಸಿ ಮಾದೇವ ಖಸ್ಕಿ ಅವರ ತೋಟದಲ್ಲಿ ಬೆಳೆದಿದ್ದ ಗಾಂಜಾ ಬೆಳೆಯಲಾಗಿತ್ತು. ಗಾಂಜಾ ಬೆಳೆದಿದ್ದ ಆರೋಪಿ ಮೇಲೆ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ಆರೋಪಿ ಮಾದೇವ ಖಸ್ಕಿಯನ್ನು ಬಂಧಿಸಿದ್ದಾರೆ. ಅಬಕಾರಿ ಪೊಲೀಸರು ಒಂದು ಕ್ವಿಂಟಲ್ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು 62 ಗಾಂಜಾ ಗಿಡಗಳಿದ್ದು, ಅದರ ಬೆಲೆ ಅಂದಾಜು 10 ಲಕ್ಷ ರೂಪಾಯಿಗಳಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಉಪ ಅಧೀಕ್ಷಕ ಶಾಂತೇಶ ಕಮತರ, ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ, ಸಿಬ್ಬಂದಿಗಳಾದ ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ, ಅಶ್ರೀತ್, ಪರಶುರಾಮ ತೆಲಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.