

ಶೃಂಗೇರಿ: ತಾಲೂಕಿನಲ್ಲಿ ಗುರುವಾರದಿಂದ ಒಂಟಿ ಸಲಗ ಬೀಡುಬಿಟ್ಟಿದ್ದು ಹಲವಾರು ರೈತರ ಜಮೀನಿನಲ್ಲಿ ಬೆಳೆಗಳನ್ನು ನಾಶಗೊಳಿಸಿದೆ.
ಹದಿನೈದು ದಿನಗಳ ಹಿಂದೆ ತಾಲೂಕಿಗೆ ಬಂದ ಎರಡು ಕಾಡಾನೆಗಳು ಜನರಲ್ಲಿ ಆತಂಕ ಸೃಷ್ಟಿಸಿದ್ದವು. ನಂತರ ಅವುಗಳು ಬಂದ ದಾರಿಯಲ್ಲಿ ಹಿಂದುರಿಗಿದ್ದವು. ಅಡ್ಡಗದ್ದೆ, ನೇತ್ರವಳ್ಳಿ, ಕವಿಲುಕೊಡಿಗೆ ಭಾಗದಲ್ಲಿ ಕಾಣಿಸಿಕೊಂಡ ಒಂಟಿ ಸಲಗ ಹೊನಗೋಡು ಗ್ರಾಮ ಹಾಗೂ ಅಡ್ಡಗದ್ದೆ ಗ್ರಾಮದಲ್ಲಿ ಓಡಾಡಿ ಅಣ್ಣುಕೊಡಿಗೆ ಶೆಡ್ ಬಳಿ ಬೀಡುಬಿಟ್ಟಿದೆ. ನೇತ್ರವಳ್ಳಿ, ಅಣ್ಣುಕೊಡಿಗೆ ಭಾಗದ ರೈತರಾದ ನಾಗೇಶ್, ಶಾಂತಾ, ಜಗದೀಶ್, ದಿನೇಶ್, ಸುರೇಶ್, ಪಾರ್ವತಿ ಸೇರಿದಂತೆ ಹಲವು ರೈತರ ಭತ್ತದ ಗದ್ದೆಗಳನ್ನು ತುಳಿದು ನಾಶ ಮಾಡಿದೆ. ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದು ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು ಸಂಜೆ 6 ಗಂಟೆಯಿಂದ ಜಾಗರೂಕರಾಗಿ ಸಂಚರಿಸಬೇಕು ಎಂದು ತಿಳಿಸಿದ್ದಾರೆ.