ಒಂಟಿ ಕಂಬದ ಮುರುಘಾಮಠದ ಅಭಿವೃದ್ಧಿ ಕ್ರಮ

CTD PADAYATRE-----
Published on

ಚಿತ್ರದುರ್ಗ: ಹೊಳಲ್ಕೆರೆ ಒಂಟಿ ಕಂಬದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಲೀಲಾ ವಿಶ್ರಾಂತಿ ತಾಣವನ್ನು ಒಂದು ಸುಂದರ ಪ್ರವಾಸಿ ತಾಣ, ಅಧ್ಯಾತ್ಮ ಹಾಗೂ ಶೈಕ್ಷಣಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಚಿತ್ರದುರ್ಗ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಒಂಟಿ ಕಂಬದ ಉಸ್ತುವಾರಿ ಶ್ರೀ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಉಳವಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವ ಹಿಸಿ ಮಾತನಾಡಿದರು.

ಮಲ್ಲಿಕಾರ್ಜುನ ಶ್ರೀಗಳ ಲೀಲಾವಿಶ್ರಾಂತಿ ತಾಣ ಅಭಿವೃದ್ಧಿಪಡಿಸಬೇಕಿದೆ. ಜನ ಜಾಗೃತಿ, ಗ್ರಾಮೀಣರ ಜೀವನ ಕ್ರಮ ಸುಧಾರಣೆಗೆ ಅರಿವು ಮೂಡಿಸಲು ಪಾದಯಾತ್ರೆ ಸುಲಭ ಮಾರ್ಗವಾಗಿದೆ. ಯಾವುದೇ ಆಡಂಬರವಿಲ್ಲದೆ ಬಸವಾದಿ ಶಿವಶರಣರ ತತ್ವಗಳನ್ನು, ದಾರ್ಶನಿಕರ ಸಂದೇಶಗಳನ್ನು ಸಾರುತ್ತ ಪಾದಯಾತ್ರೆ ಸಾಗಲಿದೆ ಎಂದು ತಿಳಿಸಿದರು.

ಶಿರಸಂಗಿ ಮುರುಘಾಮಠದ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಹಿಂದೆ ಮಲ್ಲಿಕಾರ್ಜುನ ಶ್ರೀಗಳು ಭರತ ಹುಣ್ಣಿಮೆ ದಿನ ಉಳಿವಿಯಲ್ಲಿ ಚನ್ನಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದರು. ಈ ಪಾದಯಾತ್ರೆ ರಥೋತ್ಸವದ ದಿನ ಉಳಿವಿ ಸೇರಲಿದೆ ಎಂದರು.

ಕಲಬುರಗಿ ಮರುಳಶಂಕರ ಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ಮೌಢ್ಯದ ವಿರುದ್ಧ ಹೆಜ್ಜೆ ಗುರುತುಗಳಾಗಿ, ಬದುಕಿಗೆ ಹೊಸ ಬೆಳಕನ್ನು ನೀಡುವ ಈ ಪಾದಯಾತ್ರೆ ಹಸಿರು ನಮ್ಮ ಉಸಿರಾಗಲಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಾಗಲಿದೆ ಎಂದರು.

ಬಸವ ಕಲ್ಯಾಣದ ಶರಣೆ ಸತ್ಯಕ್ಕ, ಮಾಜಿ ಶಾಸಕರಾದ ಎ.ವಿ. ಉಮಾಪತಿ, ಪಿ. ರಮೇಶಪ್ಪ ಮಾತನಾಡಿದರು. ಪುರಸಭೆ ಸದಸ್ಯ ಮುರುಘೇಶ್, ಪಿ.ಆರ್. ಮಲ್ಲಿಕಾರ್ಜುನಸ್ವಾಮಿ, ಉಳವಿ ಬಸವಕೇಂದ್ರದ ಬಸವಲಿಂಗ ಮೂರ್ತಿ ಶರಣರು, ಬಸವಕಲ್ಯಾಣದ ಶಿವಕುಮಾರ ಸ್ವಾಮೀಜಿ, ಕಲಘಟಗಿ ಮಾತೆ ಭಿಷ್ಠಾದೇವಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಬೀದರ್‌ನ ಲಲಿತಮ್ಮ, ವಚನ ಸಂಸ್ಕೃತಿ ತಾಯಿ, ಶರಣೆ ನೀಲಲೋಚನಾ ತಾಯಿ, ಜಿಪಂ ಮಾಜಿ ಅಧ್ಯಕ್ಷ ಗಂಗಾಧರಪ್ಪ, ಗಂಗಮ್ಮ ವೀರಭದ್ರಯ್ಯ, ವಿನಯ್‌ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net