ಐಸ್‌ಕ್ರೀಂ ಘಟಕ ನಿರ್ಮಾಣ ಕುರಿತು ಅಪಪ್ರಚಾರ

Nanjundaswamy
Published on

ಚಾಮರಾಜನಗರ: ಚಾಮುಲ್‌ನಲ್ಲಿ ಐಸ್‌ಕ್ರೀಂ ಘಟಕ ನಿರ್ಮಾಣದ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ರೈತರು ಕಿವಿಗೊಡಬಾರದು ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮನವಿ ಮಾಡಿದರು.

ಚಾಮುಲ್‌ನಲ್ಲಿ ಐಸ್‌ಕೀಂ ಘಟಕ ನಿರ್ಮಾಣಕ್ಕೆ ಹಿಂದಿನ ಅಧ್ಯಕ್ಷರ ಅವಧಿಯ ಸಾಮಾನ್ಯ ಸಭೆಯಲ್ಲಿ ಅನುಮೋದನೆಯಾಗಿದ್ದು, ಅವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ. ಇದರ ಬಗ್ಗೆ ರೈತ ಸಂಘದವರಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಅಪಪ್ರಚಾರ ಮಾಡುವವರಿಗೆ ಉತ್ತರ ಕೊಡಲು ಸಿದ್ಧರಾಗಿದ್ದೇವೆ. ಐಸ್‌ಕ್ರೀಂ ಘಟಕ ಸ್ಥಾಪನೆ ಮಾಡುವುದರಿಂದ ಒಕ್ಕೂಟ, ರೈತರು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 16 ಒಕ್ಕೂಟಗಳಿದ್ದು, ಚಾಮುಲ್ 8ನೇ ಸ್ಥಾನದಲ್ಲಿದೆ. ನಾವು 7.8 ವರ್ಷದಲ್ಲಿ ಇಷ್ಟು ಮಟ್ಟಕ್ಕೆ ಬಂದಿದ್ದೇವೆ. ನಮ್ಮಲ್ಲಿ ಪೇಡ, ಲಸ್ಸಿ, ಮಜ್ಜಿಗೆ, ತುಪ್ಪ ಮಾಡುತ್ತೇವೆ. ಇವೆಲ್ಲ ಉತ್ಪನ್ನಗಳಿಂದ ಲಾಭ ಇದೆ. ಬರೀ ಹಾಲು ಮಾರಾಟದಿಂದ ಲಾಭಕಡಿಮೆ ಇರುತ್ತದೆ. ಆದರೂ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು, ರೈತರಿಗೆ ಒಳ್ಳೆಯ ದರ ಹಾಗೂ ಹಲವಾರು ಸೌಲಭ್ಯ ಕೊಟ್ಟಿದ್ದೇವೆ ಎಂದರು.

ಐಸ್‌ಕ್ರೀಂ ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 5 ಕೋಟಿ, ಕೆಎಂಎಫ್ 10 ಕೋಟಿ ಕೊಡುತ್ತದೆ. ಚಾಮುಲ್‌ನಲ್ಲಿ 26 ಕೋಟಿ ಇದ್ದು, ಒಟ್ಟು 40 ಕೋಟಿ ಇದೆ. 15-20 ಕೋಟಿ ರೂ, ಮಾತ್ರ ಸಾಲ ಮಾಡಬೇಕಾಗುತ್ತದೆ. ಈ ಹಣವನ್ನು ಘಟಕ ನಿರ್ಮಾಣವಾದ 18 ತಿಂಗಳ ನಂತರ ಕಟ್ಟಬೇಕಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್, ಸುನೀಲ್, ಶೀಲಾ ಪುಟ್ಟರಂಗಶೆಟ್ಟಿ, ಕಮರವಾಡಿ ರೇವಣ್ಣ, ಎಚ್.ಎಸ್.ಬಸವರಾಜು, ಸದಾಶಿವಮೂರ್ತಿ, ಮಹದೇವಸ್ವಾಮಿ, ಸಾಹುಲ್ ಅಹಮದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net