

ರಾಯಚೂರು: ಆಲಮಟ್ಟಿಯಲ್ಲಿ ಜರುಗಿದ ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರಿಗೆ ಅವಮಾನ ಮಾಡಿದ ಸಚಿವ ಆರ್.ಬಿ.ತಿಮ್ಮಾಪುರರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಸಭೆಗೆ ಶಾಸಕರು, ಅಕಾರಿಗಳು ಹಾಗೂ ರೈತರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸಚಿವ ಆರ್.ಬಿ.ತಿಮ್ಮಾಪುರ ರೈತರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಅಭಿಪ್ರಾಯವನ್ನು ಪಡೆಯದೆ ಹಾಗೂ ಶಾಸಕರ ಮಾತಿಗೆ ಬೆಲೆ ನೀಡದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಬರದ ಸ್ಥಿತಿಯಿದ್ದರೂ ವಾರಾಬಂದಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ. 10 ದಿನ ಬಂದ್ ಮಾಡಿ ನೀರು ಹರಿಸಿದರೆ ಕೊನೆಭಾಗಕ್ಕೆ ನೀರು ತಲುಪುವುದಿಲ್ಲ.
ಹತ್ತಿ, ಮೆಣಸಿನಕಾಯಿ ನಾಟಿ ಮಾಡಲಾಗಿದ್ದು, 10 ದಿನಗಳ ನೀರು ಬಂದ್ ಮಾಡಿ ಪುನಃ ನೀರು ಹರಿಸಿದರೆ ನೀರು ತಲುಪಲು ಮೂರ‌್ನಾಲ್ಕು ದಿನಗಳು ಬೇಕಾಗಲಿದ್ದು, ಬೆಳೆಗಳು ಒಣಗಿ ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ನಾಯಕ, ಕಾರ್ಯದರ್ಶಿ ಸಾಜೀದ್ ಹುಸೇನ್, ಪದಾಕಾರಿಗಳಾದ ಶಿವಪ್ಪ, ಈರಣ್ಣ, ಮಸ್ತಾನ್, ಹನುಮೇಶ, ಸಂಗಮೇಶ ನಾಯಕ, ಈರಣ್ಣ ಸರ್ಜಾಪುರ, ರಂಗನಾಥ ಪಾಲ್ಗೊಂಡಿದ್ದರು.