

ಹುಬ್ಬಳ್ಳಿ : ಕಾಂಗ್ರೆಸ್ ಇಡೀ ರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದು, ಕರ್ನಾಟಕದಲ್ಲಿ ಆ ಪಕ್ಷದ ದುಸ್ಥಿತಿ ಐಸಿಯುನಲ್ಲಿ ಇದ್ದಂತೆ ಇದೆ. ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಬದುಕಬಹುದೆಂಬ ಭ್ರಮೆ ಆ ಪಕ್ಷದ ಮುಖಂಡರಲ್ಲಿದೆ. ಆದರೆ, ಇಂತಹ ಟೊಳ್ಳು ಆಪಾದನೆಗಳಿಂದ ಆ ಪಕ್ಷದ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿವೆ. ಇದರ ಬಗ್ಗೆ ಜನರಿಗೆ ಅರಿವು ಇದೆ. ಆದರೆ, ಕಾಂಗ್ರೆಸ್ನವರು ಜನರ ಮನಸ್ಸು ಬೇರೆಡೆ ಸೆಳೆಯುವದಕ್ಕಾಗಿ ಬಿಜೆಪಿ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮನ್ನು ಕಂಡರೆ ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಡುಕವೆಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರನ್ನು ಕಂಡರೆ ಸಣ್ಣ ಬಾಲಕನೂ ಹೆದರುವುದಿಲ್ಲ. ಇನ್ನೂ ಬಿಜೆಪಿಗೆ ಹಾಗೂ ಪ್ರಧಾನಿ ಅವರಿಗೆ ಸಿದ್ದರಾಮಯ್ಯ ಭಯ ಏಕೆ ಎಂದು ಟೀಕಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ಮುಖಂಡರು, ಅಧಿವೇಶನದಲ್ಲಿ ಒಂದೂ ಪ್ರಕರಣವನ್ನು ರ್ತಾಕ ಅಂತ್ಯದವರೆಗೆ ರ್ಚಚಿಸಲಿಲ್ಲ. ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಷ್ಟ್ರ ಸಂಘಟನೆ ಕಾರ್ಯಕ್ಕೆ ಅರ್ಪಿಸಿಕೊಂಡಿದೆ. ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಅವರದ್ದೇ ವ್ಯಕ್ತಿತ್ವ ಕಡಿಮೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹದಾಯಿ ನದಿ ನೀರು ಹಂಚಿಕೆ ವಿಷಯ ಮುಗಿದು ಹೋದ ಅಧ್ಯಾಯ. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುವುದು ಅಸಾಧ್ಯ ಎನಿಸಿದಾಗ ವಿವಾದ ಸೃಷ್ಟಿಸುವುದು ಗೋವಾದವರ ಹಳೇ ಚಾಳಿ. ನ್ಯಾಯಾಧೀಕರಣದಲ್ಲಿ ಕರ್ನಾಟಕಕ್ಕೆ ಕುಡಿಯುವ ನೀರಿನ ಪಾಲು ದೊರೆತಿದೆ ಎಂದು ತಿಳಿಸಿದರು.
ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮಹದಾಯಿ ವಿಚಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಮಹದಾಯಿ ನೀರು ಹಂಚಿಕೆ ಬಗ್ಗೆ ಕೆಲಸಗಳು ಆಗಿವೆ. ಈಗಾಗಲೇ ನ್ಯಾಯಾಲಯದಲ್ಲಿ ಕುಡಿಯುವ ನೀರಿನ ಹಂಚಿಕೆಯ ತೀರ್ಪು ಬಂದಿದ್ದು, ಅದನ್ನು ಅನುಷ್ಠಾನಗೊಳಿಸುವುದಷ್ಟೇ ಬಾಕಿ ಇದೆ ಎಂದು ಹೇಳಿದರು.
ಬಿಜೆಪಿ ನನ್ನನ್ನು ಯಾವುದೇ ಸಂದರ್ಭದಲ್ಲಿ ಕಡೆಗಣಿಸಿಲ್ಲ. ಒಂದಿಷ್ಟು ತಪು್ಪಗಳಾಗಿದ್ದರೂ ಅವುಗಳನ್ನು ಸರಿಪಡಿಸಲಾಗಿದೆ ಎಂದ ಶೆಟ್ಟರ್, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ನಾನು ಸ್ಪರ್ಧಿಸುವುದು ಖಚಿತ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.