ಐಸಿಯು ಬೆಡ್ ಹೆಚ್ಚಳಕ್ಕೆ ಹೊಸ ಪ್ಲಾನ್

B SHARAT DC Photo
Published on

ಬಾಬುರಾವ ಯಡ್ರಾಮಿ ಕಲಬುರಗಿ
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಚಿಕಿತ್ಸೆಗೆ ತೊಂದರೆಯಾಗದಂತೆ ಮುಂಜಾಗ್ರತೆಯಾಗಿ ಕಲಬುರಗಿ ಜಿಲ್ಲಾಡಳಿತ ಇನ್ನಷ್ಟು ಖಾಸಗಿ ಆಸ್ಪತ್ರೆಗಳಲ್ಲಿ `ಕೋವಿಡ್ ಕೇರ್ ಸೆಂಟರ್'ಗಳನ್ನು ಆರಂಭಿಸಲು ನಿರ್ಧರಿಸಿದೆ. ಅಲ್ಲದೆ ಜಿಮ್ಸ್ನಲ್ಲಿ ಹೆಚ್ಚುವರಿಯಾಗಿ ಐಸಿಯು ಬೆಡ್ ವ್ಯವಸ್ಥೆ ಮಾಡಿದೆ.
ಪ್ರತಿ ದಿನ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಉತ್ತಮ ದರ್ಜೆಯ ಸವಲತ್ತುಗಳೊಂದಿಗೆ ಚಿಕಿತ್ಸೆ ಸಿಗದ ಕಾರಣಕ್ಕೆ ಕೆಲವರು ಸೋಲ್ಲಾಪುರ ಮತ್ತು ಹೈದರಾಬಾದ್ ಕಡೆಗೆ ಮುಖ ಮಾಡುತ್ತಿದ್ದಾರೆ.
ಕೆಲವರಿಗೆ ಬೆಡ್ಗಳು ಸಿಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮತ್ತು ಜಿಮ್ಸ್ ಮತ್ತು ಇಎಸ್ಐಸಿಯಲ್ಲಿ ದಾಖಲಾಗಿರುವ ಸಂಖ್ಯೆ ಹೆಚ್ಚಿದ್ದರಿಂದ ಸಿಬ್ಬಂದಿ ಮೇಲೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಶರತ್ ಬಿ. ಅವರು ಇನ್ನಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಯಮಗಳಂತೆ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸುವ ಪ್ರಸ್ತಾಪ ಸಿದ್ದಪಡಿಸಿದ್ದಾರೆ.
ಜನರ ಅಪೇಕ್ಷೆಯಂತೆ ಐಸಿಯು ಮತ್ತು ಎಚ್ಯುಡಿ ಬೆಡ್ಗಳನ್ನು ಹೆಚ್ಚಿಸುವ ಮೂಲಕ ಸೋಂಕಿತರಿಗೆ ಬೇಕಾದಷ್ಟು ಸವಲತ್ತುಗಳನ್ನು ಕಲ್ಪಿಸುವುದು ಉದ್ದೇಶವಾಗಿದೆ. ಜಿಮ್ಸ್ನಲ್ಲಿರುವ ಎಲ್ಲ ಬೆಡ್ಗಳಿಗೂ ಆಕ್ಸಿಜನ್ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಕರೊನಾ ಪಾಸಿಟಿವ್ ದೃಢಪಟ್ಟವರಿಗೆಲ್ಲರಿಗೂ ಐಸಿಯು ಬೆಡ್ಗಳು ಬೇಕಾಗಿಲ್ಲ. ಸೋಂಕಿತರ ಪರಿಸ್ಥಿತಿ ಅವಲೋಕಿಸಿ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಹೀಗಾಗಿ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ವಿಜಯವಾಣಿಗೆ ತಿಳಿಸಿದರು.
ಹೊಸದಾಗಿ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ಶುರುಗೊಳ್ಳಲಿದೆ. ಈ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕೆಬಿಎನ್ ಆಸ್ಪತ್ರೆಯಲ್ಲಿ ಬೆಡ್ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಲ್ಯಾಬ್ ಸಹ ಸ್ಥಾಪನೆಯಾಗಲಿದೆ. ಅಲ್ಲದೆ ಕಲ್ಯಾಣ ಮಂಟಪದಲ್ಲಿ ಹಾಗೂ ಇನ್ನೊಂದು ಕಲ್ಯಾಣ ಮಂಟಪದಲ್ಲಿ ಕೋವಿಡ್ ಕೆರ್ ಸೆಂಟರ್ಗಳನ್ನು ಖಾಸಗಿಯವರು ಆರಂಭಿಸಿದ್ದಾರೆ. ಜತೆಗೆ ಚಿತ್ತಾಪುರದಂತೆ ಉಳಿದ ತಾಲೂಕುಗಳಲ್ಲಿ ಸಹ ಕೋವಿಡ್ ಕೇರ್ ಸೆಂಟರ್ಗಳನ್ನು ಸಹ ಆರಂಭಗೊಳ್ಳುವುದರಿಂದ ಜಿಲ್ಲಾ ಕೇಂದ್ರದಲ್ಲಿರುವ ಕೇಂದ್ರಿಕೃತ ಚಿಕಿತ್ಸೆ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಟ್ರಾಮಾ ಸೆಂಟರ್ನಲ್ಲಿ 55 ಐಸಿಯು ಬೆಡ್
ಕಲಬುರಗಿ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೆರ್ ಸೆಂಟರ್ ಕಟ್ಟಡದಲ್ಲಿ ಹೊಸದಾಗಿ 55 ಐಸಿಯು ಬೆಡ್ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 20 ಐಸಿಯು ಬೆಡ್ಗಳನ್ನು ಮಕ್ಕಳಿಗಾಗಿ(ಪಿಡಿಯಾಟ್ರಿಕ್) ಮೀಸಲಿಡಲಾಗಿದೆ. ಉಳಿದ 35 ದೊಡ್ಡವರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಇದು ಅಲ್ಲದೆ ಇನ್ನೂ 75 ಬೆಡ್ಗಳನ್ನು ಹೆಚ್ಚಿಸಲಾಗುತ್ತದೆ. ಎಚ್ಯುಡಿ ಬೆಡ್ಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದರಿಂದ ಊಸಿರಾಟದ ಸಮಸ್ಯೆಯಿಂದ ಬಳಲಿದವರಿಗೆ ಹೈ ಪ್ಲೋ ಆಕ್ಸಿಜನ್ ಸಿಗುವುದರಿಂದ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ.
ಈಗಾಗಲೇ ಬಸವೇಶ್ವರ, ಧನ್ವಂತರಿ, ವಾತ್ಸಲ್ಯ, ಕ್ರಿಸ್ಟಲ್ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳನ್ನು ಸಹ ಇನ್ನಷ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಇದರಿಂದ ಇನ್ನಷ್ಟು ಬೆಡ್ಗಳು ಹೆಚ್ಚಾಗಲಿದೆ ಎಂದು ಡಿಸಿ ಶರತ್ ಹೇಳಿದರು.


ಕಲಬುರಗಿಯ ಯುನೈಟೆಡ್ದವರು ಕೋವಿಡ್ ಕೇಂದ್ರ ಆರಂಭಿಸಿದ್ದು, ಕೆಬಿಎನ್ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ನೀಡಲು ಬೆಡ್ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಲ್ಯಾಬ್ ಸಹ ಸ್ಥಾಪನೆಯಾಗಲಿದೆ. ಬಸವೇಶ್ವರದಲ್ಲಿ ಇನ್ನಷ್ಟು ಬೆಡ್ಗಳನ್ನು ಹೆಚ್ಚಿಸಲಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ಸಿಗುವಲ್ಲಿ ಸಮಸ್ಯೆಯಾಗದಂತೆ ಬೆಡ್ಗಳ ಸಂಖ್ಯೆಯು ಹೆಚ್ಚಿಸಲಾಗುತ್ತಿದೆ. ಜಿಮ್ಸ್ನಲ್ಲಿ ಎಲ್ಲ ಬೆಡ್ಗಳಿಗೆ ಆಕ್ಸಿಜನ್ ಲಭ್ಯವಾಗುವಂತೆ ಮಾಡಲಾಗಿದೆ.
| ಬಿ.ಶರತ್ ಜಿಲ್ಲಾಧಿಕಾರಿ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net