ಐಷಾರಾಮಿಗೆ ಜನರ ತೆರಿಗೆ ಹಣ ಪೋಲು

rajat pressmeet
Published on

ಹುಬ್ಬಳ್ಳಿ: ವಿವಿಧ ವಾರ್ಡ್​ಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಅನುದಾನವಿಲ್ಲವೆಂದು ಮಹಾನಗರ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಆದರೆ, ಮಹಾಪೌರರ ಕಚೇರಿ ನವೀಕರಣಕ್ಕೆ 1 ಕೋಟಿ ರೂ. ಹಾಗೂ ಅವರು ಓಡಾಡುವ ಬಾಡಿಗೆ ಇನ್ನೋವಾ ಕಾರಿಗೆ ಪ್ರತಿ ತಿಂಗಳು 70 ಸಾವಿರ ರೂ. ಪಾವತಿಸುತ್ತಿರುವುದು ಎಷ್ಟು ಸರಿ ಎಂದು ಪಾಲಿಕೆ ಸದಸ್ಯ ಎಂ.ಎಂ. ಭದ್ರಾಪೂರ ಹಾಗೂ ವಿದ್ಯಾನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಪ್ರಶ್ನಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 53ನೇ ವಾಡಿರ್ನ ನವ ಅಯೋಧ್ಯನಗರದ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಅನುದಾನದ ಕೊರತೆ ಇರುವುದಾಗಿ ಆಯುಕ್ತರು ಹೇಳಿದ್ದಾರೆ. 5.65 ಲಕ್ಷ ರೂ. ವೆಚ್ಚ ಮಾಡಿದರೆ ಸಾಕು ವಾರ್ಡ್​ನ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದರು.
ತುರ್ತು ಕಾಮಗಾರಿಗಳಿಗೆ ಅನುದಾನದ ಕೊರತೆಯ ನೆಪ ಹೇಳುತ್ತಿರುವ ಆಯುಕ್ತರು, ಕಳೆದ 6 ತಿಂಗಳಿಂದ ಪ್ರತಿ ತಿಂಗಳು 70 ಸಾವಿರ ರೂ.ಗಳನ್ನು ಮಹಾಪೌರರ ಇನ್ನೋವಾ ಕಾರಿಗೆ ಬಾಡಿಗೆ ನೀಡುತ್ತಿದ್ದಾರೆ. ಬ್ಯಾಂಕ್​ನಿಂದ ಸಾಲ ಮಾಡಿ ಪಾಲಿಕೆಯಿಂದಲೇ ಇನ್ನೊವಾ ಕಾರು ಖರೀದಿಸಿ, ಇದೇ ಮೊತ್ತವನ್ನು ಇಎಂಐ ನೀಡಿದ್ದರೆ ಮೂರು ವರ್ಷದಲ್ಲಿ ಕಾರಿನ ಸಾಲ ತೀರುತ್ತಿತ್ತು ಎಂದು ಹೇಳಿದರು.
ಮಹಾಪೌರರು ತಮ್ಮ ಕಾರನ್ನು ಉಪ ಮಹಾಪೌರರಿಗೆ ನೀಡಿ, ತಾವು ವಿದೇಶಿ ನಿಮಿರ್ತ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ನಿವಾರಿಸುವ ಬದಲು, ತಮ್ಮ ಐಷಾರಾಮಿತನಕ್ಕೆ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ ಎಂದು ದೂರಿದರು.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವಾರ್ಡ್​ನಲ್ಲಿನ ಜನರನ್ನು ಕರೆ ತಂದು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಾಲಿಕೆ ಸದಸ್ಯರಾದ ಇಕ್ಬಾಲ ನವಲೂರ, ಸಂದಿಲಕುಮಾರ ಹಾಗೂ ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net