ಐಶ್ವರ್ಯಾಗೆ ‘ಚಿನ್ನ’ದ ಮೆರುಗು

h4-aishwarya 1
Published on

ಹುಬ್ಬಳ್ಳಿ: ಐಶ್ವರ್ಯಾ ಹುಬ್ಬಳ್ಳಿಮಠ...

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜಂಪ್​ರೋಪ್ ಸ್ಪರ್ಧೆಯಲ್ಲಿ 23 ಚಿನ್ನವನ್ನು ಕೊರಳಿಗೆ ಧರಿಸಿದ ಹೆಮ್ಮೆಯ ಕನ್ನಡ ಕುವರಿ ಈಕೆ.

ಇಲ್ಲಿನ ಬಸವ ನಗರದ ಘೊಡ್ಕೆ ಪ್ಲಾಟ್ ನಿವಾಸಿ ಐಶ್ವರ್ಯಾ ಹುಬ್ಬಳ್ಳಿಮಠ, ದ್ವಿತೀಯ ಪಿಯುಸಿ ಮುಗಿಯುವುದರೊಳಗೆ ಇಷ್ಟೆಲ್ಲ ಸಾಧನೆ ಮಾಡಿದ್ದಾಳೆ.

5ನೇ ತರಗತಿಯಿಂದಲೇ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಳು. ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಒಟ್ಟು 23 ಚಿನ್ನ, 4 ಬೆಳ್ಳಿ ಹಾಗೂ ಎರಡು ಕಂಚು ಗೆದ್ದಿದ್ದಾಳೆ.

ದೆಹಲಿಯಲ್ಲಿ 2013ರಲ್ಲಿ ನಡೆದ ಸೌಥ್ ಏಷಿಯನ್ ಕ್ರೀಡಾಕೂಟದಲ್ಲಿ 2 ಚಿನ್ನ ಹಾಗೂ ಹಾಂಕಾಗ್​ನಲ್ಲಿ 2018ರಲ್ಲಿ ಏರ್ಪಡಿಸಿದ್ದ ಏಷಿಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾಳೆ.

ಬರೀ ಕ್ರೀಡಾಕೂಟವಷ್ಟೇ ಅಲ್ಲ ಓದಿನಲ್ಲೂ ಸೈ ಎನಿಸಿಕೊಂಡಿರುವ ಐಶ್ವರ್ಯಾ ದ್ವಿತೀಯ ಪಿಯುಸಿಯಲ್ಲಿ ಶೇ. 84ರಷ್ಟು ಅಂಕ ಗಳಿಸಿದ್ದಾಳೆ. ಬಿಎಸ್​ಸಿ ಕೃಷಿ ಓದುವ ಆಸಕ್ತಿ ಹೊಂದಿದ್ದಾಳೆ. ಕ್ರೀಡಾಕೂಟದ ಕೋಟಾ ಅಡಿ ಸೀಟ್ ಸಿಗುವ ಲೆಕ್ಕಾಚಾರವಿಟ್ಟುಕೊಂಡಿದ್ದಾರೆ.

ಪೊಲೀಸ್ ಇಲಾಖೆ ಸನ್ಮಾನ

ತಂದೆ ರಾಜಶೇಖರ ನ್ಯಾಯಾಂಗ ಇಲಾಖೆ ನೌಕರ. ತಾಯಿ ರೂಪಾ ಮಗಳ ಕ್ರೀಡಾಕೂಟದ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಧಾರವಾಡ ಜಿಲ್ಲಾ ಎಸ್​ಪಿ ಕೃಷ್ಣಕಾಂತ್ ಅವರು ಐಶ್ವರ್ಯಾ ಸಾಧನೆಯನ್ನು ಗುರುತಿಸಿ, ಡಿವೈಎಸ್​ಪಿ ರವಿ ನಾಯಕರೊಂದಿಗೆ ಆಕೆಯ ಮನೆಗೆ ತೆರಳಿ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ.

ಓದಿನ ಜತೆ ಜತೆಗೆ ಜಂಪ್​ರೋಪ್ ಸ್ಪರ್ಧೆಯಲ್ಲಿ ಹೆಸರು ಮಾಡಬೇಕು ಎನ್ನುವ ಆಸೆ ಆಯಿತು. ಸತತ ಅಭ್ಯಾಸ ಮಾಡಿದೆ. ತಂದೆ-ತಾಯಿಯ ಆಶೀರ್ವಾದದಿಂದ ಸಾಧನೆ ಸಾಧ್ಯವಾಗಿದೆ.| ಐಶ್ವರ್ಯಾ ಹುಬ್ಬಳ್ಳಿಮಠ, ಚಿನ್ನದ ಹುಡುಗಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net