

ಮೂಡಿಗೆರೆ: ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯಲ್ಲಿ ಗುರುವಾರ 5 ಜನರ ತಂಡ ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದಾಗ ಗೋಣಿಬೀಡು ವಲಯದ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಿ ಬಂಧಿತರಿಂದ 5.50 ಲಕ್ಷ ರೂ. ಮೌಲ್ಯದ 54 ಕೆಜಿ ತೂಕದ ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಳಗುಳ ಗ್ರಾಮದ ಕೃಷ್ಣ, ಕಾರ್ತಿಕ್, ಹರೀಶ್, ಸ್ವಾಮಿ, ಅಗ್ನಿ ಬಂಧಿತರು. ಈ ತಂಡ ಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ವಿಷಯ ತಿಳಿದ ಹೆಗ್ಗರವಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.