ಐವರು ದರೋಡೆಕೋರರ ಸೆರೆ  - ಆನಗೋಡು ಬಳಿ ಹಣ-ಮೊಬೈಲ್ ದೋಚಿದ್ದ ಆರೋಪಿಗಳು

IMG-20231107-WA0051.jpg
Published on

ದಾವಣಗೆರೆ: ತಾಲೂಕಿನ ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಮೂವರಿಗೆ ಚಾಕು ತೋರಿಸಿ ಹಣ, ಮೊಬೈಲ್‌ಗಳನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ದಾವಣಗೆರೆಯ ಬಿ. ಕುಮಾರ, ಯು.ಮಂಜುನಾಥ, ಅಣಬೇರು ಗ್ರಾಮದ ಎ.ಬಿ. ಪ್ರವೀಣ್‌ಕುಮಾರ, ಪರಶುರಾಮ, ಬಾಡಾ ಗ್ರಾಮದ ಡಿ. ಶಿವಕುಮಾರ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆರೋಪಿಗಳಿಂದ 1 ಆಟೋ, 1 ಚಾಕು, 5 ಸಾವಿರ ನಗದು, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಕುಮಾರ, ಮಂಜುನಾಥ, ಪ್ರವೀಣ್‌ಕುಮಾರ ಈ ಹಿಂದೆ ಸಂತೇಬೆನ್ನೂರು ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು.

ತುಮಕೂರು ಜಿಲ್ಲೆ ಮಾದಿಹಳ್ಳಿ ಗ್ರಾಮದ ಎ.ಎಂ. ಸುರೇಶ ಎಂಬುವರು ಖರೀದಿಸಿದ್ದ ಮಹೇಂದ್ರ ಜಿತೋ ಪ್ಲಸ್ ಗೂಡ್ಸ್ ವಾಹನಕ್ಕೆ ಬಾಡಿ ಕಟ್ಟಿಸಿಕೊಂಡು ಬರಲು ಅ.31ರಂದು ಸ್ನೇಹಿತರಾದ ಪ್ರದೀಪ, ಅಮಿತ್ ಜತೆ ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಆನಗೋಡು ಸಮೀಪ ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸಿದಾಗ ದರೋಡೆಕೋರರು ಚಾಕು ತೋರಿಸಿ 15 ಸಾವಿರ ರೂ. ನಗದು, 20 ಸಾವಿರ ರೂ. ಮೌಲ್ಯದ ರೆಡ್‌ಮಿ ಕಂಪನಿಯ ಎರಡು ಮೊಬೈಲ್ ಕಸಿದು ಪರಾರಿಯಾಗಿದ್ದರು. ದೂರು ದಾಖಲಾಗಿತ್ತು.

ಡಿಸಿಆರ್‌ಬಿ ಡಿವೈಎಸ್ಪಿ ಬಿ.ನಾಗಪ್ಪ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ನೇತೃತ್ವದಲ್ಲಿ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಐ ಕಿರಣ್‌ಕುಮಾರ್, ಪಿಎಸ್‌ಐ ಜೋವಿತ್‌ರಾಜ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net