

ಬೆಂಗಳೂರು ಮಾದಕ ವಸ್ತು ದಂಧೆಕೋರರ ವಿರುದ್ಧ ಕಾರ್ಯಾಚರಣೆ ನಡೆಸಿ ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಐವರನ್ನು ಸೆರೆ ಹಿಡಿದಿರುವ ಉತ್ತರ ವಿಭಾಗದ ಪೊಲೀಸರು, 17.80 ಕೆ.ಜಿ. ಗಾಂಜಾ ಮತ್ತು 600 ಎಂ.ಎಲ್ ಹ್ಯಶೀಶ್ ಆಯಿಲ್ ಜಪ್ತಿ ಮಾಡಿದ್ದಾರೆ.
ಸೋಲದೇವನಹಳ್ಳಿ, ಆರ್.ಎಂ.ಸಿ. ಯಾರ್ಡ್ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಐದು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿ, ವಿಚಾರಣೆಗೊಳಪಡಿಸಲಾಗಿದೆ. ಅಲ್ಲದೆ, ಮಾದಕವಸ್ತು ಸೇವಿಸಿದ್ದ 33 ಮಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಬಸ್‌ನಲ್ಲಿ ತಂದು ಮಾರಾಟ:
ಹೊರರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ತಮಿಳುನಾಡು ಮೂಲದ ಅರುಣ್ (29), ವಿಜಯನ್ (25) ಹಾಗೂ ಮಾಗಡಿ ಮುಖ್ಯರಸ್ತೆಯ ಮಾಚೋಹಳ್ಳಿ ನಿವಾಸಿ ದೀಪನ್ ಅಲಿಯಾಸ್ ಕಾರ್ತಿಕ್‌ನನ್ನು (24)ಆರ್.ಎಂ.ಸಿ.ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 13.8 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅರುಣ್ ತಮಿಳುನಾಡಿನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದು, ವಿಜಯನ್ ಕಾರು ಚಾಲಕನಾಗಿದ್ದಾನೆ. ಬೆಂಗಳೂರಿನಲ್ಲಿ ತಮ್ಮದೇ ಆದ ಜಾಲ ಸೃಷ್ಟಿಸಿಕೊಂಡಿರುವ ಆರೋಪಿಗಳು ಮೂರ‌್ನಾಲ್ಕು ವರ್ಷದಿಂದ ದಂಧೆಯಲ್ಲಿ ತೊಡಗಿದ್ದರು. ಬಸ್‌ನಲ್ಲಿ ಗಾಂಜಾ ತರುತ್ತಿದ್ದರು. 1 ಕೆ.ಜಿ. ಗಾಂಜಾವನ್ನು 25 ಸಾವಿರ ರೂ. ಯಿಂದ 40 ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದ್ದರು. ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿನ ಕಾಲೇಜು ಸುತ್ತಮುತ್ತಲ ಪ್ರದೇಶದಲ್ಲಿ ಉಪಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬುದು ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ.
ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ದೀಪನ್ ಎಂಬಾತ ಮಾದಕ ವ್ಯಸನಿಯಾಗಿದ್ದ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾದಕ ವಸ್ತು ಮಾರಾಟ ದಂಧೆಗೆ ಇಳಿದಿದ್ದ. ಆರೋಪಿಯಿಂದ 3.4 ಕೆ.ಜಿ. ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹ್ಯಶೀಶ್ ಆಯಿಲ್ ಜಪ್ತಿ:
ಜಾಲಹಳ್ಳಿಯ ಸೆಂಟ್‌ಕ್ಲಾರೆಟ್ ಕಾಲೇಜು ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ತವನೀಶ್ ಅಲಿಯಾಸ್ ಈಶ (35) ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. 600 ಎಂ.ಎಲ್. ಹ್ಯಶೀಶ್ ಆಯಿಲ್ ಜಪ್ತಿ ಮಾಡಲಾಗಿದೆ. ಆರೋಪಿ ಜಾಲಹಳ್ಳಿ ನಿವಾಸಿಯಾಗಿದ್ದು, ಹೊರ ರಾಜ್ಯದಿಂದ ಮಾದಕದ್ರವ್ಯ ತಂದು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
33 ವ್ಯಸನಿಗಳ ಬಂಧನ:
ಮಲ್ಲೇಶ್ವರಂ, ಶ್ರೀರಾಮಪುರ, ಸುಬ್ರಮಣ್ಯನಗರ, ನಂದಿನಿಲೇಔಟ್, ಆರ್.ಟಿ.ನಗರ ಪೊಲೀಸ್ ಠಾಣೆ ಸೇರಿದಂತೆ ಉತ್ತರ ವಿಭಾಗದಲ್ಲಿ 33 ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.