ಐವರು ಕ್ರಿಕೆಟ್ ಬುಕ್ಕಿಗಳ ಬಂಧನ

30 GDG 14
Published on

ಗದಗ: ನಗರದ ಬಾಲಾಜಿನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಐವರು ಬುಕ್ಕಿಗಳನ್ನು ಬಂಧಿಸಿ 1.56 ಲಕ್ಷ ರೂ.ನಗದು ಮತ್ತು ಆರು ಮೊಬೈಲ್​ಫೋನ್​ಗಳನ್ನು ಶಹರ ಠಾಣೆ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. ಗದಗ ನಗರದ ಶ್ರೀನಿವಾಸ ವಿಶ್ವನಾಥಸಾ ಹಬೀಬ, ಅಲಾಫ್ ಮಾಬುಸಾಬ್ ತಹಶೀಲ್ದಾರ, ಸಾಗರ ನಾರಾಯಣಸಾ ಪವಾರ, ವಿನಾಯಕ ಭೀಮಸೇನಸಾ ಸಿದ್ಲಿಂಗ, ಹಾಗೂ ಪ್ರಕಾಶ ಲಕ್ಷ್ಮಣಸಾ ಬದಿ ಬಂಧಿತರು. ಬಂಧಿತರು ಕಳಸಾಪುರ ರಸ್ತೆಯಲ್ಲಿರುವ ಬಾಲಾಜಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದರು.

ದುಬೈನಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ ಮತ್ತು ಕೆಕೆಆರ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಟಿ-20 ಪಂದ್ಯದಲ್ಲಿ ಸ್ಕೋರ್ ಮತ್ತು ಫಲಿತಾಂಶದ ಮೇಲೆ ಬುಕ್ಕಿಗಳು ಬೆಟ್ಟಿಂಗ್ ಆಡುತ್ತಿದ್ದ ಸಮಯದಲ್ಲಿ ಸಿಪಿಐ ಪಿ.ವಿ. ಸಾಲಿಮಠ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದಗ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net