

ಬೀದರ್: ಅನ್ನ ಭಾಗ್ಯ ಯೋಜನೆಯ 5 ಕೆ.ಜಿ. ಹೆಚ್ಚುವರಿ ಅಕ್ಕಿ ಹಣವನ್ನು ರಾಜ್ಯ ಸರ್ಕಾರ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಿರುವ ಪ್ರಯುಕ್ತ ಅಂಚೆ ಇಲಾಖೆಯು ಜಿಲ್ಲೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ) ಶಾಖೆಗಳಲ್ಲಿ ಖಾತೆ ತೆರೆಯುವಿಕೆ ಆರಂಭಿಸಿದೆ.
ಅಂಚೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಗರದ ವಿವಿಧ ಶಾಖೆಗಳಲ್ಲಿ ಖಾತೆ ತೆರೆಯುವ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಚಿದ್ರಿ ಶಾಖೆಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸುರೇಖಾ ಅವರು, ಇಲ್ಲಿ ಚಿದ್ರಿ ವ್ಯಾಪ್ತಿಯ ಮೂರು ಪಡಿತರ ಅಂಗಡಿಗಳ ಫಲಾನುಭವಿಗಳ ಖಾತೆ ತೆರೆಯಲಾಗುತ್ತಿದೆ. ಖಾತೆ ಇದ್ದರೂ ಆಧಾರ್ ಲಿಂಕ್ ಇಲ್ಲದಿದ್ದರೆ ಹಣ ಜಮೆ ಆಗುವುದಿಲ್ಲ. ಕಾರಣ, ಖಾತೆ ಹೊಂದಿದವರು ತಪ್ಪದೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕು ಎಂದು ತಿಳಿಸಿದರು.
ಅಂಚೆ ಅಧೀಕ್ಷಕ ಶ್ರೀಕರ ಬಾಬು ಮಾತನಾಡಿ, ಪಡಿತರ ಫಲಾನುಭವಿಗಳ ಖಾತೆ ತೆರೆಯಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪ್ರಧಾನ ಅಂಚೆ ಕಚೇರಿಯ ಮಂಗಲಾ ಭಾಗವತ್ ಮಾತನಾಡಿ, ಫಲಾನುಭವಿಗಳು
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನಲ್ಲಿ ಖಾತೆ ತೆರೆದು ಅನ್ನ ಭಾಗ್ಯ ಯೋಜನೆ ಹಣ ಜಮೆ ಮಾಡಿಕೊಳ್ಳಬಹುದು. ಅಗತ್ಯವಿದ್ದಾಗ ವಿತ್ ಡ್ರಾ ಮಾಡಿಕೊಳ್ಳಬಹುದು. ಬ್ಯಾಂಕ್ ವಹಿವಾಟು ಅತ್ಯಂತ ಸುಲಭ ಹಾಗೂ ತ್ವರಿತವಾಗಿದೆ ಎಂದು ತಿಳಿಸಿದರು.
ಖಾತೆ ತೆರೆದ ಫಲಾನುಭವಿಗಳಿಗೆ ಕ್ಯೂಆರ್ ಕಾರ್ಡ್ ವಿತರಿಸಲಾಯಿತು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ಬಾಲಾಜಿ, ಚಿದ್ರಿ ಅಂಚೆ ಕಚೇರಿಯ ಸುಲೋಚನಾ, ನಗರಸಭೆ ಸದಸ್ಯರು ಹಾಗೂ ಪಡಿತರ ಅಂಗಡಿಗಳ ಮಾಲೀಕರು ಇದ್ದರು.