

ಕಲಬುರಗಿ : ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕಾಲಕ್ಕೆ ಭಾರಿ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿಯಂತೆ ಸೊಲ್ಲಾಪುರ ಪೊಲೀಸರು ಕಲಬುರಗಿಯಲ್ಲಿ ಕಾಯರ್ಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಿ, ನಗದು ಸೇರಿ 38,44,200 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೊಲ್ಲಾಪುರದ ಅವಂತಿ ನಗರದ ಅತುಲ್ ಸುರೇಶ ಸಿರಶೆಟ್ಟಿ ಮತ್ತು ಭವಾನಿಪೇಠ ನಿವಾಸಿ ಪ್ರದೀಪ ಮಲ್ಲಯ್ಯ ಕಾರಂಜೆ ಎಂಬುವರನ್ನು ಕಲಬುರಗಿಯ ಎಂ.ಬಿ. ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಸೊಲ್ಲಾಪುರ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಐಪಿಎಲ್ ಕ್ರಿಕೆಟ್ ಮ್ಯಾಚ್ ವೇಳೆಯಲ್ಲಿ ಸಿಕ್ಸರ್, ಫೋರ್ ಹೊಡೆಯುವುದು, ಪಂದ್ಯ ಇಂತಹ ತಂಡದವರು ಗೆಲ್ಲುತ್ತಾರೆ ಎಂಬುದರ ಕುರಿತು ಭಾರಿ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿಯಂತೆ ಸೊಲ್ಲಾಪುರ ಪೊಲೀಸ್ ಕಮೀಷನರ್ ಅಂಕುಶ ಸಿಂಧೆ, ಉಪ ಆಯುಕ್ತರಾದ ಅಭಯ ಮಾರ್ಗದರ್ಶನದಲ್ಲಿ ಅಲ್ಲಿನ ಸಿಟಿ ಕ್ರೈಂ ಬ್ರ್ಯಾಂಚನ ಇನ್ಸ್ಪೆಕ್ಟರ್ ಸಂಜಯ ಸಾಳುಂಕೆ, ಪಿಎಸ್ಐ ಸಂದೀಪ ಸಿಂಧೆ ಹಾಗೂ ತಂಡದವರು ಕೂಡಿಕೊಂಡು ಎರಡು ದಿನಗಳ ಹಿಂದೆ ಸೊಲ್ಲಾಪುರದ ವಸಂತ ವಿಹಾರ ಪ್ರದೇಶದಲ್ಲಿ ದಾಳಿ ನಡೆಸಿದಾಗ ಚೇತನ ರಾಮಚಂದ್ರ ಬನ್ನಲ್ ಮತ್ತು ವಿಘ್ನೇಶ ಗಾಜುನ್ ಎಂಬುವರನ್ನು ಬಂಧಿಸಿದ್ದರು.
ಅವರು ನೀಡಿದ ಮಾಹಿತಿಯಂತೆ ತಕ್ಷಣವೇ ಅದೇ ದಿನ ಕಲಬುರಗಿಯ ಎಂ.ಬಿ. ನಗರಕ್ಕೆ ಆಗಮಿಸಿ ಮನೆಯೊಂದರಲ್ಲಿ ಕುಳಿತುಕೊಂಡು ಬೆಟ್ಟಿಂಗ್ ಬುಕ್ಕಿ ಮಾಡಿಕೊಳ್ಳುತ್ತಿದ್ದ ಅತುಲ್ ಮತ್ತು ಪ್ರದೀಪನನ್ನು ಬಂಧಿಸಿಕೊಂಡು ಹೋಗಿದ್ದಾರೆ. ಈ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಕಲಬುರಗಿ ಜಿಲ್ಲೆಯ ಶಾಸಕರೊಬ್ಬರ ಸಂಬಂಧಿ ಎನ್ನಲಾದ ನಾಥ ಎಂಬುವರು ಶಾಮೀಲಾಗಿದ್ದಾರೆ ಎಂಬ ಶಂಕೆಯಿದೆ. ದಾಳಿಯ ಆತ ಪೊಲೀಸರಿಗೆ ಸಿಕ್ಕಿಲ್ಲ, ಹೀಗಾಗಿ ಆತನ ಪಾತ್ರ ಏನು, ಎಂಬಿತ್ಯಾದಿ ಕುರಿತು ಮಾಹಿತಿ ಹಾಕಿ ತನಿಖೆ ನಡೆಸಲಾಗುತ್ತಿದೆ ಎಂದು ಸೊಲ್ಲಾಪುರ ಪೊಲೀಸರು ತಿಳಿಸಿದ್ದಾರೆ.
ದಾಳಿಯ ಕಾಲಕ್ಕೆ 4 ಲ್ಯಾಪ್ಟಾಪ್, ಹಾಟ್ಲೈನ್ ಸಂಪರ್ಕಗಳು, ಮೊಬೈಲ್ಗಳು, ಮೊಡೆಮ್ ಸಂಪರ್ಕ ಸಾಧನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ದಾಳಿಯ ಕಾಲಕ್ಕೆ ಪತ್ತೆಯಾಗಿರುವ ವಸ್ತುಗಳನ್ನು ನೋಡಿದಾಗ ಕಲಬುರಗಿಯನ್ನೇ ಕೇಂದ್ರಿಕೃತಗೊಳಿಸಿಕೊಂಡು ಈ ಬೆಟ್ಟಿಂಗ್ ದಂಧೆ ನಡೆಯುತ್ತಿರುವಂತಿದೆ. ಬಂಧಿತರನ್ನು ಸೊಲ್ಲಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಂಧಿತರೆಲ್ಲರಿಗೂ ಜಾಮೀನು ಲಭಿಸಿದೆ.
ಈ ಕುರಿತು ಸೋಲ್ಲಾಪುರ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಕಲಬುರಗಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದು, ನೆರೆಯ ಸೋಲ್ಲಾಪುರ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿ ಆರೋಪಿತರ ಬಂಧಿಸಿದ್ದಾರೆ. ಆದರೆ, ಇದು ಕಲಬುರಗಿ ಪೊಲೀಸರ ಗಮನಕ್ಕೆ ಬಾರದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.