

ಹುಮನಾಬಾದ್: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಪೊಲೀಸರು, ಒಬ್ಬನನ್ನು ಬಂಧಿಸಿ 8.13 ಲಕ್ಷ ರೂ. ಮೌಲ್ಯದ ನಗದು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸವನಗರದಲ್ಲಿ ಕಾನೂನು ಬಾಹಿರವಾಗಿ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಮಂಜನಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪರಮೇಶ್ವರ (ಪಮ್ಮು) ಕಾಮಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಬೆಟ್ಟಿಂಗ್ನಲ್ಲಿ ತೊಡಗಿಸಿದ ನಗದು, ಲ್ಯಾಪ್ಟಾಪ್, ಮೊಬೈಲ್ ಸೇರಿ 8,60,700 ರೂ. ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರ ಬಂಧನಕ್ಕೆ ಜಾಲ ಬೀಸಲಾಗಿದೆ.
ಪೊಲೀಸ್ ಸಿಬ್ಬಂದಿ ಮಲ್ಲಪ್ಪ ಮಳ್ಳಿ, ಶಿವಾನಂದ, ಸಂಜೀವಕುಮಾರ, ಸುನೀಲಕುಮಾರ, ಸಿದ್ರಾಮೇಶ, ಬಸಮ್ಮಾ, ಪಂಚಶೀಲಾ ದಾಳಿಯಲ್ಲಿ ಪಾಲ್ಗೊಂಡಿದ್ದರು. ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಕಿಶೋರಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.