

ಬೀರೂರು: ಪಟ್ಟಣದ ಅಜ್ಜಂಪುರ ರಸ್ತೆ 3ನೇ ಕ್ರಾಸ್‌ನಲ್ಲಿ ಹಿಂದು ಪಡೆಯಿಂದ ಪ್ರತಿಷ್ಠಾಪಿಸಿದ್ದ ಐಪಿಎಲ್ ಚಾಂಪಿಯನ್ ಗಣೇಶನನ್ನು ಭಾನುವಾರ ವಿಸರ್ಜನೆ ಮಾಡಲಾಯಿತು.
ಗಣೇಶ ಚತುರ್ಥಿ ದಿನದಿಂದ ಪ್ರತಿ ದಿನ ಪೂಜೆ ನೆರವೇರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಸಾರ್ವಜನಿಕ ಅನ್ನಸಂತರ್ಪಣೆ ಮಾಡಿ, ಪಟ್ಟಣದ ಗಣಪತಿ ತಯಾರಕ ಕುಂಬಾರಿ ಶಿವಕುಮಾರ್ ಅವರನ್ನು ಗೌರವಿಸಲಾಯಿತು. ಬಳಿಕ ಪುಷ್ಪಗಳಿಂದ ಅಲಂಕರಿಸಿದ್ದ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ, ಅದ್ದೂರಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ 5 ಜೋಡಿ ಎತ್ತುಗಳು ಮೆರುಗು ನೀಡಿದವು. ಮೆರವಣಿಗೆಯಲ್ಲಿ ದೇವನಕೆರೆಗೆ ತೆರಳಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಹಾಗೆಯೇ ವಿವಿಧ ಮನೆಗಳಲ್ಲಿ ಮತ್ತು ಚಿಕ್ಕ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ವಿಸರ್ಜನಾ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಕುದುರೆ ಮಲ್ಲಿಕಾರ್ಜುನ್, ಉದಯ್, ಪ್ರಕಾಶ್, ವರುಣ್, ರವಿ, ಸಾತ್ವಿಕ, ತೇಜಸ್, ಅಜಯ್ ಮತ್ತು ಭಕ್ತಾದಿಗಳು ಇದ್ದರು.