

ಚಿತ್ರದುರ್ಗ: ಸಂಶೋಧನಾತ್ಮಕ, ನವೀನ ವಿನ್ಯಾಸಗಳು, ಹಕ್ಕುಸ್ವಾಮ್ಯಗಳು ಹಾಗೂ ಟ್ರೇಡ್ ಮಾರ್ಕ್‌ಗಳಿಗೆ ಸೂಕ್ತ ಭದ್ರತೆ ಒದಗಿಸಲು ಐಪಿ ಕೋಶಗಳು ನೆರವಾಗುತ್ತವೆ ಎಂದು ರಾಜ್ಯವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ. ವಿಜಯ್ ಹೇಳಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಐಪಿಆರ್ ಘಟಕದ ಸಹಯೋಗದಲ್ಲಿ ನಗರದ ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎಸ್‌ಎಂಐಟಿ-ಕೆಎಸ್‌ಸಿಎಸ್‌ಟಿ ಇಂಟಲ್ಯಾಕ್ಚ್ಯುಯಲ್ ಸೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯಾದ್ಯಂತ 87 ಐಪಿ ಕೋಶಗಳಿವೆ. ಎಸ್‌ಜೆಎಂಐಟಿಯಲ್ಲಿ 88ನೇ ಕೋಶ ಪ್ರಾರಂಭವಾಗಿದೆ. ರಾಜ್ಯದ ವಿವಿಧ ಇಂಜಿನಿಯರಿಂಗ್, ವಿಜ್ಞಾನ, ವೈದ್ಯಕೀಯ ಕಾಲೇಜುಗಳಲ್ಲಿ ಈ ಐಪಿ ಕೋಶಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಸಂಶೋಧನಾತ್ಮಕ, ನವೀನ ರೀತಿಯ ವಿನ್ಯಾಸಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಶೇ.40ಕ್ಕೂ ಹೆಚ್ಚು ಯುವ ಸಮೂಹವಿದೆ. ನವೀನ ರೀತಿಯ ವಿನ್ಯಾಸ,ಪರಿಕಲ್ಪನೆ, ಸಂಶೋಧನೆಗಳ ಮೂಲಕ ಸಮಾಜ, ಕೃಷಿಕರಿಗೆ ನೆರವು ಒದಗಿಸಲು ಯುವಜನರು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 1977-78ನೇ ಸಾಲಿನಿಂದ ಎಸ್‌ಪಿಪಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ತಾಂತ್ರಿಕ ಮತ್ತು ವಿಜ್ಞಾನ ಪ್ರಾಜೆಕ್ಟ್‌ಗಳಿಗೆ ಸಹಾಯಧನ ಒದಗಿಸುತ್ತಿದೆ. ಈವರೆಗೆ 18 ಸಾವಿರ ಪ್ರಾಜೆಕ್ಟ್‌ಗಳಿಗೆ ಸಹಾಯಧನ ನೀಡಲಾಗಿದೆ. 70 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಅಂದಾಜು 500 ಉತ್ಪನ್ನಗಳು ಮಾರುಕಟ್ಟೆಗೆ ಬರಲು ಮಂಡಳಿ ಕಾರಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಮಾತನಾಡಿ, ಐಪಿ ಕೋಶವು ಸಂಶೋಧಕರು, ಬೋಧಕರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆ, ವಿನ್ಯಾಸದ ಪೇಟೆಂಟ್‌ಗೆ ಸಂಬಂಧಿಸಿದ ಬೌದ್ಧಿಕ ಹಕ್ಕುಗಳೆಡೆ ಜಾಗೃತಿ ಮೂಡಿಸಲಿದೆ ಎಂದರು.
ರಾಜ್ಯವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಅಡ್ವೈಸರ್ ಡಾ. ನಂದಿನಿ, ಪ್ರಾಜೆಕ್ಟ್ ಅಸೋಸಿಯೇಟ್ ಎಸ್.ಆರ್. ವಿನೀತ್ ಕುಮಾರ್, ಐಐಸಿ ಸಂಚಾಲಕ ಡಾ.ಕೆ.ಆರ್. ಕೃಷ್ಣಾರೆಡ್ಡಿ, ಐಕ್ಯುಎಸಿ ಸಂಚಾಲಕ ಡಾ.ಎ.ಎಂ. ರಾಜೇಶ್, ಐಪಿ ಸೆಲ್ ಸಂಚಾಲಕ ಪ್ರೊ.ಟಿ.ನಾಗರಾಜ್ ಇತರರಿದ್ದರು. ರುಕ್ಮಿಣಿ ಪ್ರಾರ್ಥಿಸಿದರು. ಪ್ರೊ. ಸುಷ್ಮಿತಾದೇಬ್ ನಿರೂಪಿಸಿ, ಪ್ರೊ.ವಿ. ಅನುಷಾ ವಂದಿಸಿದರು.
ತರಬೇತಿ ಕಾರ್ಯಾಗಾರ:
ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕಲ್ ವಿಭಾಗದಿಂದ ಎಲೆಕ್ಟ್ರಿಕಲ್ ಸ್ಚಿಚ್‌ಗೇರ್ ಸೇಪ್ಟಿ ಅಪ್ಲಿಕೇಷನ್ಸ್ ವಿಚಾರ ಕುರಿತ 4 ದಿನಗಳ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಪ್ರಾಚಾರ್ಯ ಡಾ.ಪಿ.ಬಿ. ಭರತ್ ಕಾರ್ಯಾಗಾರ ಉದ್ಘಾಟಿಸಿದರು. ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ. ಕುಮಾರಸ್ವಾಮಿ, ಸಂಪನ್ಮೂಲ ವ್ಯಕ್ತಿ ಡಿ.ವಿ. ಶಿವಾನಂದ್, ಎಸ್. ಬಸವೇಶ್‌ಶೆಟ್ಟಿ, ಡಾ.ಎ.ಎಂ. ರಾಜೇಶ್, ಡಾ.ಎಸ್.ಸಿ. ಮಂಜುನಾಥ್, ಪ್ರೊ.ಟಿ. ಸುಧಾ, ಪ್ರೊ.ಕೆ. ಸಂಜಯ್‌ಕುಮಾರ್ ಇತರರು ಇದ್ದರು. ಚೈತ್ರಾ, ರಮ್ಯ ಪ್ರಾರ್ಥಿಸಿದರು. ಅಂಕಿತಾ ಸ್ವಾಗತಿಸಿದರು. ಕೇಸರ್‌ಮಲನ್, ಮುಸ್ಕಾನ್ ನಿರೂಪಿಸಿದರು.