

ಚಿಂಚೋಳಿ: ಐನೋಳ್ಳಿ ಗ್ರಾಮ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆ ಏರಲು ತೀವ್ರ ಕಸರತ್ತು ನಡೆಯುತ್ತಿರುವಾಗಲೇ ಮಹಾರಾಷ್ಟ್ರ ಪುಣೆಯ ಲಾಡ್ಜ್ ಒಂದರಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರನ್ನು ಅಪಹರಿಸುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶಶಿಧರ ಗಾರಂಪಳ್ಳಿ, ರಾಜರೆಡ್ಡಿ ಚಂದ್ರಂಪಳ್ಳಿ, ರಾಮಣ್ಣ ಚಿಂಚೋಳಿಕರ್, ಆಸೀಫ್ ಉಡ, ಶಿವಕುಮಾರ ಮೂಲಗಿ, ಶೇಖ್ ಭಕ್ತಿಯಾರ್ ಅಪಹೃತರು. ಪಂಚಾಯಿತಿಯಲ್ಲಿ ೧೮ ಸದಸ್ಯರಿದ್ದು, ಆ.೭ರಂದು ಚುನಾವಣೆ ನಡೆಯಲಿದೆ.
೧೫ ದಿನಗಳಿಂದ ಬಿಜೆಪಿ ಬೆಂಬಲಿತ ೧೧ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು. ಪುಣೆಯ ಲಾಡ್ನಲ್ಲಿದ್ದಾಗ ಕೆಲವರು ರೂಮ್ ಒಳಗೆ ನುಗ್ಗಿ ಬೆದರಿಸಿದ್ದಲ್ಲದೆ ೬ ಜನರನ್ನು ಎಳೆದೊಯ್ದಿದ್ದಾರೆ. ಶೇಖ್ ಭಕ್ತಿಯಾರ್ ಅವರನ್ನು ಪುಣೆ ಹೊರಭಾಗದಲ್ಲಿ ವಾಹನದಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ. ಅಪಹರಣದ ಸನ್ನಿವೇಶ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶೇಖ್ ಭಕ್ತಿಯಾರ್ ಅವರು ಸಂಸದ ಡಾ.ಉಮೇಶ ಜಾಧವ್ ಹಾಗೂ ಶಾಸಕ ಡಾ.ಅವಿನಾಶ ಜಾಧವ್ ಇತರರಿಗೆ ಕರೆ ಮಾಡಿ ಅಪಹರಣದ ಬಗ್ಗೆ ತಿಳಿಸಿದ್ದಾರೆ. ಇನ್ನು ಬಿಜೆಪಿ ಮುಖಂಡ ವೀರಸಿಂಗ್ ಅವರು ಮಹಾರಾಷ್ಟ್ರದ ಪಿಂಪರಿ-ಚಿಂಚವಾಡ ವಿಧಾನಸಭಾ ಕ್ಷೇತ್ರದ ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಮುಖಂಡರಾದ ಲೋಕೇಶ ಫತ್ತೇಪುರ, ವಿಜಯಕುಮಾರ ಮಾಡಗಿ ಇತರರ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದಾರೆ.
ಹಲ್ಲೆ ಮಾಡಿ ಎಳೆದೊದುಕೊಂಡು ಹೋದ್ರು ನಾವು ೧೧ ಸದಸ್ಯರು ಪುಣೆ ಲಾಡ್ವ್ವೊಂದರಲ್ಲಿ ಇದ್ದೆವು. ಶುಕ್ರವಾರ ರಾತ್ರಿ ೮ರ ಸುಮಾರಿಗೆ ಕೆಲವರು ರೂಮಿಗೆ ನುಗ್ಗಿ ಹಲ್ಲೆ ಮಾಡಲು ಯತ್ನಿಸಿದರು. ನೀವ್ಯಾಕೆ ಇಲ್ಲಿದ್ದೀರಿ? ಏನು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಬಳಿಕ ಒಬ್ಬೊಬ್ಬರೇ ಬಂದು ನನ್ನನ್ನು ಸಹಿತ ೬ ಜನರನ್ನು ಎಳೆದೊಯ್ದು ವಾಹನದಲ್ಲಿ ಕೂರಿಸಿದರು. ದೂರ ಹೋದ ನಂತರ ನನ್ನನ್ನು ಕೆಳಗಿಳಿಸಿ ಉಳಿದವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಒಂದು ಕ್ಷಣ ಭಯವಾಗಿತ್ತು. ನಮ್ಮ ಮುಖಂಡರೊಂದಿಗೆ ಮಾತನಾಡಿ ಸುರಕ್ಷಿತವಾಗಿ ರೂಮ್‌ಗೆ ಬಂದಿದ್ದೇನೆ ಎಂದು ಅಪಹರಣದ ಸನ್ನಿವೇಶವನ್ನು ಶೇಖ್ ಭಕ್ತಿಯಾರ್ ಮಾಧ್ಯಮಗಳೆದುರು ಬಿಚ್ಚಿಟ್ಟರು.
ಫೋನ್ ಸ್ವಿಚ್ ಆಫ್
ಅಪಹರಣಕಾರರು ಕಿಡ್ನ್ಯಾಪ್ ಮಾಡಿರುವ ಐನೋಳ್ಳಿ ಗ್ರಾಪಂ ಸದಸ್ಯರ ಕುಟುಂಬದವರ ಜತೆ ಶನಿವಾರ ಬೆಳಗ್ಗೆ ಫೋನ್ ಮಾಡಿ ಮಾತನಾಡಿದ್ದು, ನಿಮ್ಮವರು ಸುರಕ್ಷಿತವಾಗಿದ್ದಾರೆ. ಇನ್ನೊಂದು ದಿನದಲ್ಲಿ ಕಲಬುರಗಿಗೆ ತಂದು ಬಿಡುತ್ತೇವೆ ಎಂದು ಹೇಳಿದ್ದಾರೆ. ಬಳಿಕ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಅಪಹೃತ ಸದಸ್ಯರ ಕುಟುಂಬದವರೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.