

ಗದಗ: ರೈತರು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಐದು ಹಾಪ್ ಕಾಮ್್ಸ ಮಳಿಗೆಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದಕೊಳ್ಳುವಂತೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ರೈತರಿಗೆ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಕರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಕೈಗೊಂಡ ಕ್ರಮಗಳ ಕುರಿತು ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ಹಾಪ್ಕಾಮ್್ಸ ಮಳಿಗೆ ಮಾತ್ರವಲ್ಲದೆ, ರೈತರು ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಇಲಾಖೆ ವತಿಯಿಂದ ಸಹಾಯವಾಣಿ ಹೆಲ್ಪ್ ಡೆಸ್ಕ್ಗಳನ್ನು ರಚಿಸಲಾಗಿದೆ. ಉತ್ಪನ್ನ ಮಾರಾಟಕ್ಕಾಗಿ ಹಸಿರು ಕಾರ್ಡ್ (ಗ್ರೀನ್ ಪಾಸ್) ವಿತರಿಸಲಾಗುತ್ತಿದೆ. ರೈತ ಉತ್ಪಾದಕರ ಸಂಘಗಳಿಂದ ಗ್ರಾಹಕರಿಗೆ ತರಕಾರಿ ಹಾಗೂ ಹಣ್ಣುಗಳನ್ನು ಮೊಬೈಲ್ ವೆಂಡಿಂಗ್ ವ್ಯಾನ್ ಮೂಲಕ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಹೂ ಬೆಳೆ ನಷ್ಟದ ವರದಿ ಸಲ್ಲಿಕೆ: ಲಾಕ್ಡೌನ್ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಒಂದು ಕೋಟಿ ರೂ. ಅಧಿಕ ಹೂ ಬೆಳೆಗಾರ ರೈತರು ನಷ್ಟ ಅನುಭವಿಸಿದ್ದಾರೆ. ಮಾರ್ಚ್ 1 ರಿಂದ ಇಲ್ಲಿಯವರೆಗೆ ಕನಕಾಂಬರ 16 ಟನ್, ಚೆಂಡು ಹೂವು 40 ಟನ್, ಮಲ್ಲಿಗೆ 238.92 ಟನ್, ಸೇವಂತಿಗೆ 619.73 ಟನ್, ಸುಗಂಧರಾಜ ಕಡ್ಡಿ ಹೂವು 263.13 ಟನ್, ಗ್ಲಾಡಿಯೊಲಸ್ ಕಡ್ಡಿ ಹೂವು 22.50 ಟನ್, ಗುಲಾಬಿ ಹೂವು 4 ಟನ್, ಸಂರಕ್ಷಿತ ಬೇಸಾಯದ ಅಡಿ ಬೆಳೆದ ಕಾರ್ನೆಶನ್ 4 ಟನ್, ಜರ್ಬೆರಾ ಹೂವು 2 ಟನ್ ಸೇರಿದಂತೆ ವಿವಿಧ ತಳಿಯ 796.37 ಟನ್ನಷ್ಟು ಹೂವಿನ ಬೆಳೆ ಮಾರುಕಟ್ಟೆಯಲ್ಲಿ ಮಾರಾಟವಾಗದೆ ಇರುವ ಕುರಿತು ಜಿಲ್ಲಾಧಿಕಾರಿ ಹಾಗೂ ಇಲಾಖೆಯ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.