

ಹಗರಿಬೊಮ್ಮನಹಳ್ಳಿ: ಮಳೆಗಾಲದಲ್ಲಿ ಜಾಕ್‌ವೆಲ್‌ಗೆ ನೀರು ಬಂದ ಕೂಡಲೇ ಬೃಹತ್ ಕಾರ್ಯಕ್ರಮದೊಂದಿಗೆ ಚಿಲವಾರಬಂಡಿ ಏತ ನೀರಾವರಿ ಯೋಜನೆ ಮೂಲಕ ರೈತರಿಗೆ ನೀರು ಕೊಡಲಾಗುವುದು ಎಂದ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಕಡಲಬಾಳು ಬಳಿಯಿರುವ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿ ಗುರುವಾರ ಮಾತನಾಡಿದರು. ಕಡಲಬಾಳು, ಆನಂದ ದೇವನಹಳ್ಳಿ ಹಾಗೂ ಸ್ಪಲ್ಪಮಟ್ಟಿಗೆ ಬ್ಯಾಲಾಳ್ ಗ್ರಾಮಗಳನ್ನೊಳಗೊಂಡ ಚಿಲವಾರ ಬಂಡಿ ಏತ ನೀರಾವರಿ ಯೋಜನೆ 30 ವರ್ಷಗಳ ನಿರಂತರ ಹೋರಾಟದ ಫಲವಾಗಿದೆ ಎಂದರು.
2012ರಲ್ಲಿ ತುಂಗಭದ್ರಾ ಬೋರ್ಡ್‌ನಿಂದ ನೀರಿಗಾಗಿ ಪರವಾನಗಿ ತೆಗೆದುಕೊಂಡು ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಆದರೆ, ಬದಲಾದ ಸರ್ಕಾರದಲ್ಲಿ ಯೋಜನೆ ನನೆಗುದಿಗೆ ಬಿದ್ದಿತ್ತು. 10 ವರ್ಷ ಕಾಮಗಾರಿ ಕುಂಟುತ್ತಾ ಸಾಗಿ ಈಗ ಪೂರ್ಣಗೊಂಡಿದೆ. 63 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ 5 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಾಧ್ಯ. ಪರೋಕ್ಷವಾಗಿ 15 ಸಾವಿರ ಎಕರೆ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲವಾಗಲಿದೆ ಎಂದರು.
ಕೊಟ್ಟೂರು ಸೇರಿದಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ 17 ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ ಕಾಮಗಾರಿಗೆ ಡಿಪಿಆರ್ ಆಗಿದೆ. ನಂದಿ ದುರ್ಗಾ, ತಂಬ್ರಹಳ್ಳಿ ಕುದುರೆ ಕಾಲುವೆ 2ನೇ ಹಂತದ ನೀರಾವರಿ, ಮರಬ್ಬಿಹಾಳ್ ಏತನೀರಾವರಿ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ತಿಳಿಸಿದರು.
ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಪಟ್ಟಣದ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ತೋಂಟದಾರ್ಯ ಶಾಖಾಮಠದ ಮಹಾಂತ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಕಡಲಬಾಳು ಗ್ರಾಪಂ ಸದಸ್ಯರಾದ ಛಲವಾದಿ ರಮೇಶ, ಕರ್ಕಿಹಳ್ಳಿ ಸಂತೋಷ, ಎಚ್.ದೊಡ್ಡಬಸಪ್ಪ, ಒಂಟಿಗೋಡಿ ವಿರೂಪಾಕ್ಷ, ಆರ್‌ಎಸ್‌ಎಸ್‌ಎನ್ ನಿರ್ದೇಶಕ ಒಂಟಿಗೂಡಿ ಅಶೋಕ, ಪುರಸಭೆ ಸದಸ್ಯರಾದ ನಾಗರಾಜ ಜನ್ನು, ದೀಪಕ್ ಕಠಾರೆ, ಪ್ರಮುಖರಾದ ಕನ್ನಿಹಳ್ಳಿ ಚಂದ್ರು, ಅಂಬಳಿ ರವೀಂದ್ರಗೌಡ, ತಹಸೀಲ್ದಾರ್ ಆರ್.ಕವಿತಾ, ಇಂಜಿನಿಯರ್ ನಾಗರಾಜ ನಾಯ್ಕ, ನೀರಾವರಿ ಇಲಾಖೆಯ ಇಇ ಗಿರೀಶ, ಎಇಇ ಧರ್ಮರಾಜ, ಎಇ ಹುಲಿರಾಜ, ಪಿಡಿಒ ಜಗಳೂರು ಕೊಟ್ರೇಶಪ್ಪ ಮತ್ತಿತರರು ಇದ್ದರು.