

ದಾವಣಗೆರೆ: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಶ್ರೀರಾಮಸೇನೆ ಜು.18ರಿಂದ 28ರವರೆಗೆ ರಾಜ್ಯವ್ಯಾಪಿ 5 ಲಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
ಜು.18ರಂದು ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಗಣ್ಯ ವ್ಯಕ್ತಿಗಳು, ವಕೀಲರು, ವೈದ್ಯರು, ಸಾಹಿತಿಗಳನ್ನೊಳಗೊಂಡಂತೆ ಸಹಿ ಸಂಗ್ರಹಿಸಿ ಜು.28ರಂದು ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೆ ಕಳುಹಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನ ಯಾವುದೇ ದೇಶದಲ್ಲಿಲ್ಲದ ಎರಡು ಕಾನೂನು ಭಾರತದಲ್ಲಿವೆ. ಕೇಂದ್ರ ಸರ್ಕಾರ ಮುಂಬರುವ ಮುಂಗಾರು ಅಧಿವೇಶನದಲ್ಲಿ ಉದ್ದೇಶಿತ ಮಸೂದೆ ಜಾರಿಗೊಳಿಸುವಂತೆ ಅಭಿಯಾನದ ಮೂಲಕ ಆಗ್ರಹಿಸಲಾಗುವುದು. ಮುಸ್ಲಿಮರನ್ನೂ ಶೋಷಣೆಯಿಂದ ಹೊರತರುವ ನಿಟ್ಟಿನಲ್ಲಿ ಸಮಾನ ನಾಗರಿಕ ಹಕ್ಕು ಕಾನೂನು ಜಾರಿಗೆ ಬರಬೇಕು. ಕೇಂದ್ರ ಸರ್ಕಾರ ವಿರೋಧಿ ದನಿಗಳಿಗೆ ಸೊಪ್ಪು ಹಾಕಬಾರದು ಎಂದರು.
* ವಿಧಾನಸೌಧಕ್ಕೇ ನುಗ್ಗುತ್ತೇವೆ!
ವಿಧಾನ ಪರಿಷತ್ ಸದಸ್ಯ ಬಿ.ಎ. ಫಾರೂಖ್ ವಿಧಾನಸಭೆಯಲ್ಲಿ ನಮಾಜ್‌ಗೆ ಪ್ರತ್ಯೇಕ ಅವಕಾಶ ನೀಡುವಂತೆ ಕೇಳಿರುವುದು ಖಂಡನೀಯ.
ಒಂದು ವೇಳೆ ಅದಕ್ಕೆ ಅವಕಾಶ ನೀಡಿದಲ್ಲಿ ಶ್ರೀರಾಮಸೇನೆ ಮತ್ತು ಹಿಂದು ಸಮಾಜ ವಿಧಾನಸೌಧಕ್ಕೆ ನುಗ್ಗಿ ನಿತ್ಯ ಹನುಮಾನ್ ಚಾಲೀಸ ಪಠಣ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಫಾರೂಖ್ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಅವರನ್ನು ಪರಿಷತ್ ಸದಸ್ಯತ್ವದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಗೋಶಾಲೆ ನಿರ್ಮಾಣಕ್ಕೆಂದು ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಜಾಗ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ದೃಷ್ಟಿಯಿಂದ ನಿವೇಶನ ಹಂಚಿಕೆಗೆ ತಡೆ ಹಿಡಿದಿದೆ. ವಕ್ಫ್ ಬೋರ್ಡ್ ಹಲವೆಡೆ ಭೂಮಿ ಕಬಳಿಸಿರುವ ಆರೋಪಗಳಿದ್ದು ಅವನ್ನು ಸಿಎಂ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ ಲವ್‌ಜಿಹಾದ್ ನಡೆಯುತ್ತಿದೆ. ದೊಡ್ಡ ಕುಟುಂಬಗಳನ್ನು ಗುರಿಯಾಗಿಸಿ ಇಂಥ ಕೃತ್ಯ ನಡೆಸಲಾಗುತ್ತಿದೆ. ಲವ್‌ಜಿಹಾದ್, ಮತಾಂತರ ತಡೆಗೆ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರಯತ್ನಿಸಿದ್ದರು. ಮಹಿಳಾ ಪೊಲೀಸ್ ಪಡೆ ರಚಿಸುವ ಮೂಲಕ ಇವಕ್ಕೆ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ ಶ್ರೀರಾಮಸೇನೆ ನಿವಾರ್ಯವಾಗಿ ರಸ್ತೆಗಿಳಿಯಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ ಸರ್ಕಾರ್, ಆಲೂರು ರಾಜಶೇಖರ್, ಪಿ.ಸಾಗರ್, ಶ್ರೀಧರ್, ವಿನೋದರಾಜ್, ವಿನಯ್, ಪಳನಿ ಸುದ್ದಿಗೋಷ್ಠಿಯಲ್ಲಿ ಇದ್ದರು.
---