ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ ಶಾಸಕ ರಾಯರಡ್ಡಿ ಹೇಳಿಕೆ

25KKNR-02
Published on

ಕುಕನೂರು (ಕೊಪ್ಪಳ): ಸಿಎಂ ಸಿದ್ದರಾಮಯ್ಯ ಅವರ ಹೊಸ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ಜನಪರ ಕಾರ್ಯಕ್ರಮ ಕೈಗೊಂಡಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ವೀರಾಪುರ ಗ್ರಾಮದಲ್ಲಿ ಜನ ಸಂಪರ್ಕ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

ರಾಜ್ಯದಲ್ಲಿ ಹೊಸ ಸರ್ಕಾರ ಬಂದು ಎರಡು ತಿಂಗಳಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಜನಪರ ಕಾರ್ಯಕ್ರಮ ಕೈಗೊಂಡಿದ್ದಾರೆ. ನಾನು ಹಿರಿಯ ಶಾಸಕನಾಗಿದ್ದು, ಸರ್ಕಾರ ಹಲವಾರು ತಿರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ನನ್ನ ಸಲಹೆ ಕೂಡ ಇರುತ್ತದೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೊಂಡಿದ್ದು, 52 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿ ದಿನ 13 ರಿಂದ 14 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇನ್ನೂ 10 ಕೆಜಿ ಅಕ್ಕಿ ಘೋಷಣೆಯ ಗ್ಯಾರಂಟಿ ಕೂಡ ಜಾರಿಗೊಳಿಸಿದ್ದು, ಕೇಂದ್ರ ಸರ್ಕಾರ ಹಣ ನೀಡುತ್ತೇವೆ ಅಕ್ಕಿ ಪೂರೈಸಲಿಲ್ಲ. ಈ ಹಿಂದೆ ಕೇಂದ್ರದಲ್ಲಿ ಪ್ರಧಾನಿ ಮನ್‌ಮೋಹನ್‌ಸಿಂಗ ಆಡಳಿತ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿ, ದೇಶದ ಎಲ್ಲಾ ರಾಜ್ಯಗಳ ಜನರಿಗೆ ಕನಿಷ್ಠಿ 5 ಕೆಜಿ ಆಹಾರ ಪೂರೈಸಲಾಗುತ್ತಿದೆ.

ಆದರೆ, ಬಿಜೆಪಿಯ ಶಾಸಕ ಅರಗ ಜ್ಞಾನೇಂದ್ರ ಅವರು ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5 ಕೆಜಿ ಅಕ್ಕಿ ಉಚಿತವಾಗಿ ಜಾರಿಗೊಳಿಸಿದರು ಎಂದು ಹೇಳಿದರು. ಆದರೆ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿಯೇ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದಾಗ ಸುಮ್ಮನೆ ಕುಳಿತರು. ಇನ್ನೂ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಯ ಹಣ ಕೂಡ ಅ.16 ರಿಂದ ಬಿಡುಗಡೆಯಾಗಲಿದ್ದು, ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ 65 ಸಾವಿರ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ ಎಂದರು.

ವೀರಾಪುರ ಸ್ಥಳಾಂತರ ಗ್ರಾಮವಾಗಿದ್ದು, ಸ್ಥಳಾಂತರ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಳ್ಳಿ. ಸ್ಥಳಾಂತರ ಪ್ರದೇಶಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅಲ್ಲದೇ ಸುಳ್ಳು ಹೇಳೀ ಮತ ಕೇಳಲ್ಲ. ಜನರಿಗೆ ಒಳೆಯದಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net