ವಿಜಯಪುರಕ್ಕೆ ದಕ್ಷಿಣ ವಾರಣಾಸಿ ಕರೆದಿರುವುದು ಸೂಕ್ತ

mla news
ವಿಜಯಪುರ ನಗರದ ನರಸಿಂಹ ದೇವಸ್ಥಾನದಲ್ಲಿ ನರಸಿಂಹದೇವ ಟ್ರಸ್ಟ್ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಸಂಗಮೇಶ ಕಲ್ಯಾಣಿ ವಿರಚಿತ ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು ಗ್ರಂಥ ಲೋಕಾರ್ಪಣೆ ನಂತರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸನ್ಮಾನಿಸಲಾಯಿತು.
Published on

ವಿಜಯಪುರ: ವಿಜಯಪುರ ನಗರವು ಐತಿಹಾಸಿಕವಾಗಿ ಪಾರಂಪರಿಕವಾಗಿ ಅತ್ಯಂತ ಪುರಾತನ ನಗರವಾಗಿದ್ದು, ದೇವಗಿರಿ ಯಾದವ ರಾಜರ ಕಾಲಕ್ಕೆ ದಕ್ಷಿಣ ವಾರಣಾಸಿ ಎಂದು ಕರೆದಿರುವುದು ವಿಜಯಪುರ ನಗರದ ಐತಿಹಾಸಿಕ ಧಾರ್ಮಿಕ ಪರಂಪರೆ ಹಾಗೂ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.

ನಗರದ ನರಸಿಂಹ ದೇವಸ್ಥಾನದಲ್ಲಿ ನರಸಿಂಹದೇವ ಟ್ರಸ್ಟ್ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಸಂಗಮೇಶ ಕಲ್ಯಾಣಿ ವಿರಚಿತ ದಕ್ಷಿಣ ವಾರಣಾಸಿ ವಿಜಯಪುರ ನರಸಿಂಹ ದೇವರು ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ವಿಜಯಪುರ ನಗರದಲ್ಲಿ ಎಲ್ಲೆ ಉತ್ಖನನ ಮಾಡಿದರು ಪುರಾತನ ಲಕ್ಷ್ಮೀ , ಗಣಪತಿ, ಗಂಗೆ, ಗೌರಿ, ಹನುಮಾನ ಹಾಗೂ ನರಸಿಂಹ ದೇವರ ವಿಗ್ರಹಗಳು ಸಿಗುತ್ತವೆ. ಜತೆಗೆ ಇಲ್ಲಿರುವ ಶಾಸನಗಳು ಶಿಲಾಲಾಂಛನಗಳು ಹಾಗೂ ಐತಿಹಾಸಿಕ ಶಿಲ್ಪಗಳು ನಗರದ ಗತ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಪುರಾತನ ನಗರ ಹಾಗೂ ನರಸಿಂಹ ದೇವರ ಐತಿಹಾಸಿಕ ದಾಖಲೆಗಳ ಕುರಿತು ದಕ್ಷಿಣ ವಾರಣಾಸಿ ನರಸಿಂಹ ದೇವರು ಎಂಬ ಗ್ರಂಥ ಬರೆದಿರುವ ಡಾ. ಸಂಗಮೇಶ ಕಲ್ಯಾಣಿ ಹಾಗೂ ಅದನ್ನು ಪ್ರಕಾಶನ ಮಾಡಿರುವ ನರಸಿಂಹ ದೇವರ ಟ್ರಸ್ಟ್ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಉಪನ್ಯಾಸಕ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ, ವಿಜಯಪುರ ಪರಿಸರದಲ್ಲಿ ನರಸಿಂಹ ದೇವಸ್ಥಾನದ ಕುರಿತು ಅತ್ಯಂತ ಪ್ರಮುಖ ದಾಖಲೆಗಳಾದ ಶಿಲಾಶಾಸನಗಳು ಉಪಲಬ್ದವಿದ್ದು ಅವುಗಳಲ್ಲಿ ನಗರವನ್ನು ದಕ್ಷಿಣ ವಾರಣಾಸಿ ಎಂದು ಕರೆದಿರುವದು ಐತಿಹಾಸಿಕ ಪ್ರಮುಖ ದಾಖಲೆಯಾಗಿದೆ ಎಂದರು.

ವಿಜಯಪುರದ ಕೋಟೆಯಲ್ಲಿ ಕಂಡು ಬರುವ ಕೀರ್ತಿಮುಖ ನರಸಿಂಹನೆ ದಕ್ಷಿಣ ವಾರಣಾಸಿಯ ಆದಿದೇವತೆಯಾಗಿ ಹಾಗೂ ರಾಜರ ಕೀರ್ತಿ ಲಾಂಛನವಾಗಿ ಬಳಕೆಯಾಗಿರುವದು ನರಸಿಂಹ ದೇವರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇಂತಹ ಗ್ರಂಥವನ್ನು ರಚನೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟ ನರಸಿಂಹ ದೇವ ಟ್ರಸ್ಟ್ ಅಧ್ಯಕ್ಷ ಸುಭಾಸ ಪೂಜಾರಿ ಹಾಗೂ ಕಾರ್ಯಕಾರಿ ಮಂಡಳಿಯ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಗ್ರಂಥ ಪರಿಚಯ ಮಾಡಿ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಮಾತನಾಡಿ, ಇತಿಹಾಸದ ಗರ್ಭದಲ್ಲಿ ಹುದಗಿರುವ ಸತ್ಯಗಳನ್ನು ಪ್ರತಿಯೊಬ್ಬ ನಾಗರಿಕರಿಗೆ ತಿಳಿಸಬೇಕಾದದ್ದು ಇತಿಹಾಸಕಾರನ ಕರ್ತವ್ಯವಾಗಿದೆ. ಜತೆಗೆ ಪ್ರಮುಖ ದಾಖಲೆಗಳನ್ನು ಆಧಾರ ಸಮೇತ ಪ್ರಸ್ತುತ ಪಡಿಸಬೇಕಾದದ್ದು ಇಂದಿನ ಅಗತ್ಯವಾಗಿದೆ. ನರಸಿಂಹ ದೇವರಿಗೆ ರಾಜರ ಕಾಲದಲ್ಲಿ ಬಿಟ್ಟ ದಾನ ದತ್ತಿಗಳ ಬಗ್ಗೆ ಸುಮಾರು 11 ಶಾಸನಗಳು ಉಪಲಬ್ಧವಿದ್ದು ಅವುಗಳಲ್ಲಿ ಆರು ಶಾಸನಗಳಲ್ಲಿ ದಕ್ಷಿಣ ವಾರಣಾಸಿ ಎಂದು ಉಲ್ಲೇಖಿಸಿರುವುದು ವಿಜಯಪುರ ದಕ್ಷಿಣ ವಾರಣಾಸಿ ಎಂಬುದಕ್ಕೆ ಪ್ರಮುಖ ದಾಖಲೆಗಳಾಗಿವೆ ಎಂದರು.

ಐತಿಹಾಸಿಕ ಶಾಸನಗಳು ಹಾಗೂ ಪೇಶ್ವೆಗಳ ಕಾಲದ ಮೋಡಿಲಿಪಿ ದಾಖಲೆಗಳಿಂದ ನರಸಿಂಹ ದೇವಸ್ಥಾನಕ್ಕೆ 990 ವರ್ಷಗಳ ಇತಿಹಾಸ ಹಾಗೂ ಪೂಜಾರಿ ಮನೆತನಕ್ಕೆ 890 ವರ್ಷಗಳ ಇತಿಹಾಸ ಇರುವುದು ಅಧ್ಯಯನಗಳಿಂದ ತಿಳಿದು ಬರುತ್ತದೆ. ಕರ್ನಾಟಕ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ವರ್ಷವಿಡಿ ಸಾವಿರಾರು ಭಕ್ತರು ಆಗಮಿಸುತ್ತಾರೆ ಎಂದರು.

ಐತಿಹಾಸಿಕವಾಗಿ ಇವರೆಲ್ಲ ಮಂಗಳವೇಡೆಯಿಂದ ತರ್ದವಾಡಿ ನಾಡು ಆಳುತ್ತಿದ್ದ ತೆಲಗು ಚೋಳ ರಾಜ್ಯ, ತಿಕ್ಕರಸನ ಆಸ್ಥಾನದಲ್ಲಿದ್ದ ಸೈನಿಕರು, ರಾಜ್ಯ ಪರಿವಾರಕ್ಕೆ ಸೇರಿದವರಾಗಿದ್ದಾರೆ. ದಕ್ಷಿಣ ಭಾರತ ಈ ಪ್ರಮುಖ ರಾಜ್ಯಗಳಿಂದ ಭಕ್ತರು ಇಂದಿಗೂ ಆಗಮಿಸುತ್ತಿರುವುದರಿಂದ ದಕ್ಷಿಣ ವಾರಣಾಸಿ ವಿಜಯಪುರ ಎಂಬ ಹೆಸರು ಇಂದಿನ ಸಂದರ್ಭಕ್ಕೂ ಅತ್ಯಂತ ಸೂಕ್ತವಾಗಿದೆ ಎಂದರು.

ವಿಜಯಪುರ ನಗರದ ವರ್ತಕ ವಿಶ್ವನಾಥ ಭೋಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನರಸಿಂಹ ದೇವ ಟ್ರಸ್ಟ್ ಅಧ್ಯಕ್ಷ ಸುಭಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ನರಸಿಂಹ ದೇವ ಟ್ರಸ್ಟ್ ಕಾರ್ಯದರ್ಶಿ ಶಿವಶರಣ ಕಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನೂಲಿನ ಸಾಯಿಶಿವಕುಮಾರ ಸಿದ್ದಸಿರಿ ಸೌಹಾರ್ದ ಹಾಗೂ ಟ್ರಸ್ಟ್ ನಿರ್ದೇಶಕ ಶಿವಾನಂದ ಅಣ್ಣೆಪ್ಪನವರ, ಮಹಾದೇವಿ ಪೂಜಾರಿ, ಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ವಿ.ವಿ. ಹಿರೇಮಠ, ಮಹೇಂದ್ರ ಪೂಜಾರಿ, ವೀರೇಂದ್ರ ಪಾಟೀಲ, ಸುರೇಶಗೌಡ ಪಾಟೀಲ, ಹಣಮಂತ ಕಲಾದಗಿ, ಪ್ರವೀಣ ಪೂಜಾರಿ, ಪಾರ್ಶ್ವನಾಥ ಶಿರಹಟ್ಟಿ, ನಿಂಗಪ್ಪ ಪೂಜಾರಿ, ಸಿದ್ದಣ್ಣ ಉತ್ನಾಳ, ಅಪ್ಪು ಕವಟಗಿ, ಮಲ್ಲು ಕಂಬಾರ, ಸಿದ್ದು ರುಮಾಲಬಾವಿ, ಶಿವಾಜಿ ಕುಮಟಗಿ, ಈರಣ್ಣ ಬಿರಾದಾರ, ಅಶೋಕ ಬಿಸನಾಳ, ಮುದಕಪ್ಪ ಉಕ್ಕಲಿ, ರಾಹುಲ ಪೂಜಾರಿ, ನಿರಂಜನ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net