

ಹೊಸನಗರ: ಬಿದನೂರು ಮಲೆನಾಡಿಗೆ ಮಾತ್ರವಲ್ಲ, ಇಡೀ ಕರ್ನಾಟಕದ ಆತ್ಮ. ಇತಿಹಾಸ, ವರ್ತಮಾನದಲ್ಲಿ ತ್ಯಾಗ, ಬಲಿದಾನಕ್ಕೆ ಹೆಸರಾದ ಬಿದನೂರಿನ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು. ಹೊಸನಗರ ಬಿಜೆಪಿ ಮಂಡಲ, ನಗರ ಮಹಾಶಕ್ತಿ ಕೇಂದ್ರದಿಂದ ಹರ್‌ಘರ್ ತಿರಂಗಾ ಅಭಿಯಾನದ ಅಂಗವಾಗಿ ಗುರುವಾರ ಕೋಟೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ದೇಶವಾಸಿಗಳು ಒಗ್ಗಟ್ಟಾಗಿರಬೇಕು. ನಮ್ಮನ್ನು ಹಿಂದೆ ಎಳೆಯುವವರು ಎಲ್ಲ ಕಾಲದಲ್ಲೂ ಇರುತ್ತಾರೆ. ಇದಕ್ಕಾಗಿ ಸದಾ ಎಚ್ಚರಿಕೆಯಿಂದ ಇರಬೇಕು ಎಂಬ ಕಾರಣಕ್ಕೆ ಸ್ವಾತಂತ್ರ್ಯೋತ್ಸವವನ್ನು ವಿವಿಧ ರೀತಿ ಆಚರಣೆ ಮಾಡುತ್ತಿದ್ದೇವೆ. ಕೇವಲ ಹೈದರಾಲಿ ಆಕ್ರಮಣದಿಂದ ಬಿದನೂರು ಸಂಸ್ಥಾನಕ್ಕೆ ಘಾಸಿಯಾಗಿಲ್ಲ. ನಮ್ಮವರೇ ಮಾಡಿದ ಒಳಸಂಚಿನಿಂದ ಬಿದನೂರು ಸಂಸ್ಥಾನ ಅವಸಾನವಾಯಿತು ಎಂದರು. ನಗರಕ್ಕೆ ಹೋಗೋದು ಹೆಣ ಹೊರೋಕೆ ಎಂದು ಗೇಲಿ ಮಾಡಲಾಗುತ್ತದೆ. ಆದರೆ ಅದರ ಇತಿಹಾಸ ಗೊತ್ತಿಲ್ಲ. ಒಂದೇ ಸಮಯದಲ್ಲಿ 250ರಿಂದ 300 ಜನರನ್ನು ವಿಚಾರಣೆ ಮಾಡಿ ಮರಣದಂಡನೆ ವಿಸಿದ ಸ್ಥಳವಿದು. ಎಲ್ಲರೂ ಭಯಯಿಂದ ದಿಕ್ಕಾಪಾಲಾಗಿ ಹೋದ ಸಂದರ್ಭ ಈ ವ್ಯಂಗ್ಯದ ಮಾತು ಚಾಲ್ತಿಗೆ ಬಂದಿದೆ. ಈ ಮಾತಿನ ಗಾಂಭೀರ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಬಿದನೂರಿನ ಐತಿಹಾಸಿಕ ಮಹತ್ವದ ಕುರಿತು ಇತಿಹಾಸ ಸಂಶೋಧಕ ಅಂಬ್ರಯ್ಯಮಠ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನೂಲಿಗ್ಗೇರಿಯಿಂದ ಚಿಕ್ಕಪೇಟೆ ನಗರ ಮಾರ್ಗವಾಗಿ ಬಿದನೂರು ಕೋಟೆವರೆಗೆ ತಿರಂಗಾ ಧ್ವಜ ಬೈಕ್ ರ‌್ಯಾಲಿ ನಡೆಯಿತು. ಮಾಜಿ ಶಾಸಕ ಅಶೋಕ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ, ಉಪಾಧ್ಯಕ್ಷ ನರ್ತಿಗೆ ಸುರೇಶ್, ನಗರ ಶಕ್ತಿಕೇಂದ್ರದ ಅಧ್ಯಕ್ಷ ಎಚ್.ಜಿ.ರಮಾಕಾಂತ್, ಪ್ರಮುಖರಾದ ಆಲುವಳ್ಳಿ ವೀರೇಶ್, ಸುರೇಶ ಸ್ವಾಮಿರಾವ್, ನಿತಿನ್, ಉಮೇಶ್, ಕೆ.ವಿ.ಕೃಷ್ಣಮೂರ್ತಿ, ಮಂಜುನಾಥ್, ರಾಜೇಶ್, ಎಂ.ಎನ್.ಸುಧಾಕರ್, ಆರ್.ಟಿ.ಗೋಪಾಲ್, ಉಮೇಶ್ ಕಂಚುಗಾರ್, ಎನ್.ಆರ್.ದೇವಾನಂದ್, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್ ಇತರರಿದ್ದರು.
ದೇಶದ ಎರಡನೇ ದೊಡ್ಡ ರಾಜ್ಯವಾಗಿ ಮೈಸೂರು ಸಂಸ್ಥಾನ ಹಿರಿಮೆ ಪಡೆಯಲು ಬಿದನೂರು ಸಂಸ್ಥಾನ ಸೇರಿದ್ದೇ ಕಾರಣ. ಸ್ವಾತಂತ್ರ್ಯ ಭಾರತವು ಅಭಿವೃದ್ಧಿಯ ಕಾಲದಲ್ಲಿದೆ. ಭಾರತವು ಇದೀಗ ಪ್ರಪಂಚದ 4ನೇ ಆರ್ಥಿಕತೆಯ ರಾಷ್ಟ್ರವಾಗಿದೆ. ಮುಂದಿನ ದಿನಗಳಲ್ಲಿ ಮೂರನೇ ರಾಷ್ಟ್ರವಾಗಲಿದೆ. ಹರತಾಳು ಹಾಲಪ್ಪ, ಮಾಜಿ ಸಚಿವ