ಐತಿಹಾಸಿಕ ಚಪ್ಪರದಕಲ್ಲಿಗೆ ಸಿಗಲಿದೆ ಕಾಯಕಲ್ಪ!, ಜಿಲ್ಲಾಡಳಿತದಿಂದ ಗ್ರೀನ್ ಸಿಗ್ನಲ್, ಸರ್ವೇ ವರದಿ ಬಳಿಕ ಮುಂದಿನ ಹೆಜ್ಜೆ

chapparadakallu
Published on

ವಿಜಯವಾಣಿ ವಿಶೇಷ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿಯೇ ಶಾಸನಗಳ ತವರು ಎನಿಸಿರುವ ದೇವನಹಳ್ಳಿ ತಾಲೂಕು ಅನೇಕ ಐತಿಹಾಸಿಕ ಕುರುಹುಗಳನ್ನು ಮಡಿಲಿನಲ್ಲಿ ಹುದುಗಿಸಿಕೊಂಡಿದೆ. ಬಹುತೇಕ ಸ್ಥಳಗಳು ಇಂದಿಗೂ ಪ್ರವಾಸಿಗರಿಂದ ದೂರವೇ ಉಳಿದಿವೆ. ಮತ್ತೆ ಕೆಲವು ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆಯ ಅವಕೃಪೆಯಿಂದ ಇತಿಹಾಸದ ಗರ್ಭದಡಿಯಲ್ಲೇ ಉಸಿರು ಬಿಗಿಹಿಡಿದು ಕುಳಿತಿವೆ. ಇಂಥಹದ್ದೇ ಇತಿಹಾಸವಿರುವ ಕುಂದಾಣ ಹೋಬಳಿಯ ‘ಚಪ್ಪರದಕಲ್ಲು’ ಎಂದೇ ಖ್ಯಾತಿಯಾಗಿರುವ ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಇದೀಗ ಜಿಲ್ಲಾಡಳಿತ ಮನಸ್ಸು ಮಾಡಿದೆ.

ಬಹಳ ವರ್ಷಗಳಿಂದ ಸದ್ದು ಮಾಡುತ್ತಿದ್ದ ಚಪ್ಪರಕಲ್ಲು ಕಾಯಕಲ್ಪದ ವಿಷಯ ಈಗ ಮುನ್ನೆಲೆ ಬಂದಿದ್ದು, ಸಾರ್ವಜನಿಕರು, ಹಲವು ಇತಿಹಾಸ ತಜ್ಞರು, ಪ್ರವಾಸಿಗರ ಒತ್ತಾಯದ ಮೇರೆಗೆ ಜಿಲ್ಲಾಡಳಿತ ತಹಸೀಲ್ದಾರ್ ನೇತೃತ್ವದಲ್ಲಿ ಜಾಗದ ಸರ್ವೇ ನಡೆಸಲು ಆದೇಶ ನೀಡಿದೆ. ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ದೇವನಹಳ್ಳಿ ತಹಸೀಲ್ದಾರ್ ಸರ್ವೇ ಮಾಡಲು ಸಿದ್ಧತೆ ನಡೆಸಿದ್ದು, ಸರ್ವೇ ವರದಿ ಬಳಿಕ ಸಾಧಕ ಬಾಧಕ ಪರಿಶೀಲಿಸಿ ಕಾಯಕಲ್ಪಕ್ಕೆ ಯೋಜನೆ ಸಿದ್ಧಪಡಿಸುವ ಚಿಂತನೆ ಇದ್ದು ಜಿಲ್ಲಾಡಳಿತ ಮುಂದಿನ ಹೆಜ್ಜೆ ಇಡಲಿದೆ.

ಏನಿದು ಚಪ್ಪರದಕಲ್ಲು?: ಬೃಹತ್ ಏಕಶಿಲೆ ಬಂಡೆಯೊಂದರ ಮೇಲೆ ಚಪ್ಪರದ ಆಕಾರದಲ್ಲಿ ಕಟ್ಟಡ ಮಾದರಿ ನಿರ್ಮಾಣ ಮಾಡಿರುವುದರಿಂದ ಇದನ್ನು ಚಪ್ಪರದಕಲ್ಲು ಎಂದೇ ಕರೆಯಲಾಗುತ್ತಿದೆ. ಜಿಲ್ಲಾಡಳಿತ ಭವನ ನಿರ್ಮಾಣವಾಗಿರುವ ಗ್ರಾಮದ ಹೆಸರೇ ಚಪ್ಪರದಕಲ್ಲು. ಇದಕ್ಕೆ ಈ ಹೆಸರು ಬರಲು ಈ ವಿಶೇಷ ಬಂಡೆಯೇ ಕಾರಣ ಎನ್ನಲಾಗಿದ್ದು, ಇದರ ಇತಿಹಾಸ ಹುಡುಕುವ ಸಾಕಷ್ಟು ಕೆಲಸವೂ ಪ್ರಗತಿಯಲ್ಲಿದೆ. ದೊಡ್ಡಬಳ್ಳಾಪುರ-ದೇವನಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಈ ಸ್ಥಳ ಹಲವು ವರ್ಷದಿಂದ ಕುತೂಹಲ ಕಾಯ್ದುಕೊಂಡಿದೆ. ಹೆದ್ದಾರಿಯಲ್ಲಿ ಸಾಗುವ ಪ್ರತಿಯೊಬ್ಬರಿಗೂ ಇದು ಗೋಚರಿಸುತ್ತದೆ. ಹಳಬರಿಗೆ ಇದು ಕೇವಲ ಬಂಡೆಯಾದರೆ ಹೊಸಬರಿಗೆ ಇದೊಂದು ಕುತೂಹಲಭರಿತವಾಗಿ ಕಾಣಸಿಗುತ್ತದೆ. ಜಿಲ್ಲಾಡಳಿತ ಭವನದ ಕಣ್ಣಳತೆ ದೂರದಲ್ಲೇ ಇರುವ ಚಪ್ಪರಕಲ್ಲು ಎಂಬ ವಿಶೇಷ ಬಂಡೆ ನೂರಾರು ವರ್ಷದಿಂದ ಮಳೆ, ಗಾಳಿ, ಬಿಸಿಲಿಗೆ ಎದೆಯೊಡ್ಡಿಕೊಂಡಿದೆ.

ರಾಣಿಯ ವಿಶ್ರಾಂತಿ ಗೃಹ: ದೇವನಹಳ್ಳಿಯ ಇತಿಹಾಸ ತಜ್ಞ ಗುರುಸಿದ್ದಯ್ಯ ಅವರ ಮಾಹಿತಿಯಂತೆ ನೂರಾರು ವರ್ಷದ ಹಿಂದೆ ರಾಣಿಯೊಬ್ಬರು ಸಖಿಯರೊಂದಿಗೆ ಈ ಭಾಗಕ್ಕೆ ಭೇಟಿ ನೀಡಿದ್ದರು, ಆಗ ಉರಿಬಿಸಿಲಿನಿಂದ ರಕ್ಷಣೆ ಪಡೆಯಲು ವಿಶ್ರಾಂತಿ ತಾಣಕ್ಕಾಗಿ ಹುಡುಕಾಟ ನಡೆಸಿದರು. ಆಗ ಕಾಡಿನ ಮಧ್ಯೆ ಇದ್ದಂಥ ಬೃಹತ್ ಬಂಡೆ ಇವರ ಗಮನ ಸೆಳೆಯಿತು. ಕೂಡಲೇ ಈ ಬಂಡೆಯ ಮೇಲೆ ವಿಶ್ರಾಂತಿ ಗೃಹ ನಿರ್ಮಾಣ ಮಾಡುವಂತೆ ಆದೇಶಿಸಿದರು. ರಾಣಿ ಆಣತಿಯಂತೆ ಕೆಲಸ ಆರಂಭವಾದರೂ ಕಾರಣಾಂತರದಿಂದ ಅದು ಪೂರ್ಣಗೊಂಡಿಲ್ಲ ಎನ್ನಲಾಗಿದೆ.

ಜಾಗದ ತಕರಾರು: ಈ ಚಪ್ಪರದಕಲ್ಲು ಇರುವ ಜಾಗ ಸರ್ಕಾರಿ ಭೂಮಿಯೋ ಅಥವಾ ಖಾಸಗಿಯವರದ್ದೋ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಸರ್ಕಾರಿ ಜಾಗವಾದರೆ ಅಭಿವೃದ್ಧಿಗೆ ಅಡ್ಡಿಯಿಲ್ಲ, ಖಾಸಗಿಯಾದರೆ ಜಾಗ ಖರೀದಿಸುವ ಚಿಂತನೆಯೂ ಇದೆ. ಆದರೆ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಆದ್ದರಿಂದ ಚಪ್ಪರದಕಲ್ಲು ಕಾಯಕಲ್ಪ ಜಿಲ್ಲಾಡಳಿತಕ್ಕೆ ದುಬಾರಿಯಾಗಲಿದೆ. ಜಾಗದ ತಕರಾರು ಬಗೆಹರಿದರೆ ಅಭಿವೃದ್ಧಿಗೆ ಅಡೆತಡೆ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಚಪ್ಪರಕಲ್ಲು ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ನಡೆಯಬೇಕಾದ ಪ್ರಕ್ರಿಯೆ ಆರಂಭವಾಗಿದೆ, ಜಿಲ್ಲಾಡಳಿತವೂ ಉತ್ಸುಕತೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮೊದಲು ಜಾಗದ ಸರ್ವೇಯಾಗಬೇಕೆಂಬ ಕಾರಣಕ್ಕೆ ಡಿಸಿ ಸೂಚನೆಯಂತೆ ತಹಸೀಲ್ದಾರ್ ನೇತೃತ್ವದಲ್ಲಿ ಸರ್ವೇ ನಡೆಯಲಿದೆ. ಇದರ ಸಾಧಕ-ಬಾಧಕಗಳ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು. ಚೆಲುವಾಂಬ, ಉಪನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ ದೇವನಹಳ್ಳಿ ತಾಲೂಕಿನಲ್ಲಿ ಹಲವು ಐತಿಹಾಸಿಕ ಸ್ಥಳಗಳಿಗೆ, ಇವುಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಆಸಕ್ತಿ ತೋರಿಸಬೇಕು, ಚಪ್ಪರದಕಲ್ಲಿಗೂ ಇಂಥ ಇತಿಹಾಸವಿದೆ. ಜಿಲ್ಲಾಡಳಿತ ಭವನದ ಕಣ್ಣಳತೆಯಲ್ಲೇ ಇರುವುದರಿಂದ ಇದರ ಕಾಯಕಲ್ಪಕ್ಕೆ ಜಿಲ್ಲಾಡಳಿತ ಮುಂದಾದರೆ ಜಿಲ್ಲೆಯ ಜನರೆಲ್ಲರೂ ಸ್ವಾಗತಿಸುತ್ತಾರೆ. ಗುರುಸಿದ್ದಯ್ಯ, ಇತಿಹಾಸ ತಜ್ಞ ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net