

ತೇರದಾಳ: ಇಲ್ಲಿನ ಐತಿಹಾಸಿಕ ಕೆರೆ ಒತ್ತುವರಿಯಾಗುತ್ತಿದ್ದು, ಅದನ್ನು ತೆರವುಗೊಳಿಸಿ ನಮ್ಮ ಕೆರೆ ಉಳಿಸಿಕೊಡುವಂತೆ ಪಟ್ಟಣದ ಸಾಗರ ಸರಿಕರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕು ಭೂಮಾಪನ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಕೆರೆ ಪರಿಶೀಲಿಸಿದರು.
ಪಟ್ಟಣದ ಐತಿಹಾಸಿಕ ಕೆರೆಯೆಂದೆನಿಸಿಕೊಂಡ ಇವುಗಳು ದಿನೇ ದಿನೆ ಅತಿಕ್ರಮಣವಾಗುವ ಮೂಲಕ ಮುಂದೊಂದು ದಿನ ಇಲ್ಲವಂತಾಗಬಹುದು. ಪ್ರಭಾವಿಗಳು ಕೆರೆ ಒತ್ತುವರಿಯಲ್ಲಿ ತೊಡಗಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಸರಿಯಲ್ಲ. ಕೂಡಲೇ ಅತಿಕ್ರಮಣವಾಗಿರುವ ಕೆರೆಯ ಭಾಗ ತೆರವುಗೊಳಿಸಿ ಅದನ್ನು ಸುಂದರ ತಾಣವನ್ನಾಗಿ ಮಾಡಬೇಕೆಂದು ಅರ್ಜಿದಾರರು ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಬಕವಿ-ಬನಹಟ್ಟಿ ತಾಲೂಕು ಸರ್ವೇಯರ್ ಏಕನಾಥ ಮುಂಡಾಸ ಹಾಗೂ ತೇರದಾಳ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಮಾತನಾಡಿ, ಸರ್ವೇ ಸಂಖ್ಯೆ 553ರಲ್ಲಿರುವ 13 ಎಕರೆ 5 ಗುಂಟೆಯಿರುವ ತೇರದಾಳ ಕೆರೆ ಒತ್ತುವರಿಯಾಗಿರುವ ಬಗ್ಗೆ ಅರ್ಜಿ ಸಲ್ಲಿಕೆಯಾದ ಬಳಿಕ ಇಂದು ಪರಿಶೀಲಿಸಲು ಆಗಮಿಸಿದ್ದು, ಸೂಕ್ತ ತಾಂತ್ರಿಕ ಉಪಕರಣಗಳ ಲಭ್ಯತೆಗನುಸಾರವಾಗಿ ಸರ್ವೇ ಕಾರ್ಯ ಶೀಘ್ರ ಆರಂಭವಾಗಿ 15 ದಿನದಲ್ಲಿ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.
ತೇರದಾಳ ಗ್ರಾಮ ಆಡಳಿತಾಧಿಕಾರಿ ರೇವಣಸಿದ್ಧ ಕಾಮತೆ, ಪುರಸಭೆ ಜೆಇ ಭಾಗ್ಯಶ್ರೀ ಪಾಟೀಲ, ಮಹಾದೇವ ಯಲ್ಲಟ್ಟಿ, ಸಾರ್ವಜನಿಕರಾದ ಮಂಜು ಸರಿಕರ, ರವೀಂದ್ರ ದೊಡಮನಿ ಇದ್ದರು.