

ನರಗುಂದ: ಮೂಲ ಸೌಕರ್ಯ ಹಾಗೂ ಆಧುನಿಕ ತಂತ್ರಜ್ಞಾನದ ಅಭಾವದಿಂದ ಸೊರಗುತ್ತಿರುವ ರಾಜ್ಯದ ಎಲ್ಲ ಸರ್ಕಾರಿ ಐಟಿಐ ಸಂಸ್ಥೆಗಳಿಗೆ ಹೊಸ ಮೆರುಗು ನೀಡಲು ರಾಜ್ಯ ಸರ್ಕಾರ ಹಾಗೂ ಟಾಟಾ ಸಂಸ್ಥೆ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಟಾಟಾ ಸಂಸ್ಥೆ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು ಉನ್ನತೀಕರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ 4636.50 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಿದ್ದಾರೆ ಎಂದರು.
ಕೈಗಾರಿಕೆ ಕ್ಷೇತ್ರಕ್ಕೆ ಪ್ರಸ್ತುತ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವ ಸರ್ಕಾರಿ ಐಟಿಐ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು. ಇದಕ್ಕೆ ಅಗತ್ಯವಾದ ಡಿಜಿಟಲೀಕರಣ, ಕಂಪ್ಯೂಟರೀಕರಣ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಕಲ್ಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಏ.17 ರ ನಂತರ ಇಲ್ಲಿನ ಐಟಿಐ ಕಾಲೇಜಿಗೆ ಮತ್ತೊಮ್ಮೆ ಭೇಟಿ ನೀಡುತ್ತೇನೆ. ಸಣ್ಣ ಕೈಗಾರಿಕೆ ಇಲಾಖೆಯಿಂದ ಯಾವ ರೀತಿಯ ಸಹಾಯ, ಸಹಕಾರ ಮಾಡಬೇಕು ಎಂಬುವುದರ ಕುರಿತು ಚರ್ಚೆಸುತ್ತೇನೆ ಎಂದರು.
ಪ್ರಾಚಾರ್ಯ ಮೋಹನ ಪತಂಗ್ ಮಾತನಾಡಿದರು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ಈಶ್ವರಪ್ಪ ದ್ಯಾವನಗೌಡ್ರ, ಜಿಪಂ ಸದಸ್ಯೆ ರೇಣುಕಾ ಅವರಾಧಿ, ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಉಮೇಶಗೌಡ ಪಾಟೀಲ, ಪುರಸಭೆ ಸದಸ್ಯ ಸುನೀಲ ಕುಷ್ಟಗಿ, ನೇತಾಜಿಗೌಡ ಕೆಂಪನಗೌಡ್ರ, ವಿನಾಯಕ ಕಲಾಲ, ವಿ.ಐ. ಗುಡಿ, ರಾಮನಗೌಡ ಪಾಟೀಲ, ಎಂ.ಎಚ್. ಸವದತ್ತಿ, ಎಸ್.ಕೆ. ಭೂಸನೂರಮಠ, ಎಸ್.ವೈ. ಜಂಬಗಿ, ಕೆ.ಬಿ. ದೇವರ, ಎ.ಎ. ನಾಲಬಂದ, ಎಂ.ಡಿ. ತಾಬೂಲಿ, ರಮೇಶ ಪಲ್ಲೇದ, ಎಸ್.ಎಸ್. ಗಟ್ಟಿ, ನಾಗರಾಜ ಹಡಗಲಿ ಉಪಸ್ಥಿತರಿದ್ದರು.