

ಹುಬ್ಬಳ್ಳಿ : ‘ಐಟಿ-ಬಿಟಿ ಕೈಗಾರಿಕೆಗಳು ಪ್ರತಿಭೆ ಆಧಾರಿತವಾಗಿ ಬೆಳೆಯುವಂಥವು. ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಸಾಕಷ್ಟು ಪ್ರತಿಭೆಗಳಿದ್ದು, ಅವಕಾಶ ಒದಗಿಸುವ ದೃಷ್ಟಿಯಿಂದ ಸರ್ಕಾರ ಬಿಯಾಂಡ್ ಬೆಂಗಳೂರು ಘೋಷಣೆ ಮಾಡಿ, ಪ್ರೋತ್ಸಾಹ ನೀಡುತ್ತಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಬೆಂಗಳೂರು ಹೊರತುಪಡಿಸಿದ ನಗರಗಳಲ್ಲಿ ಅನೇಕ ಐಟಿ-ಬಿಟಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ.’
ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಹೀಗೆ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ನ ಹುಬ್ಬಳ್ಳಿ ಕಚೇರಿಗೆ ಸೋಮವಾರ ಆಗಮಿಸಿದ್ದ ಸಚಿವರು ಸಂವಾದದಲ್ಲಿ ಮಾತನಾಡಿದರು. ‘ಬಿಯಾಂಡ್ ದಿ ಬೆಂಗಳೂರು ೋಷಣೆ ಕಾರ್ಯರೂಪಕ್ಕೆ ತರಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (ಕೆಡಿಇಎಂ) ಸ್ಥಾಪನೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಐಟಿ-ಬಿಟಿ ಕ್ಷೇತ್ರದ ಉದ್ಯಮಿಗಳಲ್ಲಿ ಬೆಂಗಳೂರೇತರ ನಗರಗಳ ಬಗ್ಗೆ ವಿಶ್ವಾಸ ಹೆಚ್ಚಿಸಲು ಮುಂದಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಮುಂದಿನ 10 ತಿಂಗಳಲ್ಲಿ 8 ಹೊಸ ಸ್ಟಾರ್ಟಪ್ ಕಾರ್ಯಾರಂಭ ಮಾಡಲಿವೆ. ಸ್ಟಾರ್ಟಪ್‌ಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಇಲ್ಲಿ ಐಐಟಿ, ಐಐಐಟಿ ಸೇರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತೀರ್ಣರಾದವರಲ್ಲಿ ಕೆಲವರು ಇಲ್ಲಿಯೇ ಉದ್ಯೋಗ ಮಾಡಲು ಪೂರಕ ಕೈಗಾರಿಕೆ ಸ್ಥಾಪನೆಯಾಗುವಂತೆ ಮಾಡುವುದು ಸರ್ಕಾರದ ಧ್ಯೇಯವಾಗಿದೆ. ಪ್ರಧಾನಿಯವರ ಘೋಷಣೆಯ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಕಾರಕ್ಕೆ ಜ್ಞಾನ ಆಧಾರಿತ ಕೈಗಾರಿಕೆಗಳನ್ನು ಹೆಚ್ಚಿಸುವುದು ಪೂರಕವಾಗಿದೆ ಎಂದರು.
ಐಟಿ, ಬಿಟಿ ಕಂಪನಿಗಳಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ರಾಜ್ಯದ ಶೇ. 90ರಷ್ಟು ಭಾಗದಲ್ಲಿ 4ಜಿ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ 5ಜಿಯನ್ನೂ ಅನುಷ್ಠಾನಗೊಳಿಸುತ್ತೇವೆ. ಇಂಟರ್‌ನೆಟ್ ಗುಣಮಟ್ಟ ಹೆಚ್ಚಿಸುತ್ತೇವೆ. ಇಂದಿನ ದಿನಗಳಲ್ಲಿ ಇಂಟರ್‌ನೆಟ್ ನೀರಿನಷ್ಟೇ ಅಗತ್ಯವಾಗಿದೆ. ಟೆಲಿಕಾಂ ಪಾಲಿಸಿ ತಂದಿರುವ ಮೊದಲ ರಾಜ್ಯ ನಮ್ಮದು ಎಂದು ವಿವರಿಸಿದರು.