ಐಟಿ ಪಾವತಿದಾರರ ಬಳಿಯೂ ಬಿಪಿಎಲ್ ಕಾರ್ಡ್!

BPL CARD
Published on

ಸುಭಾಸ ಧೂಪದಹೊಂಡ ಕಾರವಾರ

ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದು, ಬಯಲಾಗಿದೆ. ಅವರಿಂದ ಕಾರ್ಡ್​ಗಳನ್ನು ವಾಪಸ್ ಪಡೆದು ದಂಡ ಕಟ್ಟಿಸಿಕೊಳ್ಳಲಾಗಿದೆ. ಈಗ ಆದಾಯ ತೆರಿಗೆದಾರರ ಸರದಿ. ಜಿಲ್ಲೆಯಲ್ಲಿ 1170 ಆದಾಯ ತೆರಿಗೆ ಪಾವತಿದಾರರು ಆದ್ಯತಾ ಪಡಿತರ ಚೀಟಿ ಹೊಂದಿರುವುದನ್ನು ಗುರುತಿಸಲಾಗಿದ್ದು, ಎಲ್ಲ ಕಾರ್ಡ್​ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. ಆ ಎಲ್ಲ ಕುಟುಂಬಗಳಿಗೆ ಇದೇ ತಿಂಗಳಿಂದ ಪಡಿತರ ಬಂದ್ ಮಾಡಲಾಗುತ್ತಿದೆ.

ಕಳೆದ ಫೆ. 17 ರಂದು ನಡೆದ ಆಹಾರ ಸಚಿವರ ಸಭೆಯಲ್ಲಿ ಕೇಂದ್ರದ ಆದಾಯ ತೆರಿಗೆ ಇಲಾಖೆಯ ಜತೆ ಮಾಹಿತಿ ಹಂಚಿಕೊಂಡು ಪಡಿತರ ಚೀಟಿಗಳ ಸತ್ಯಾಸತ್ಯತೆ ಪರಿಶೀಲನೆಗೆ ನಿರ್ಣಯಿಸಲಾಗಿತ್ತು. ಅದರಂತೆ ಪಡಿತರ ಚೀಟಿಗಳ ಜತೆ ಲಿಂಕ್ ಆಗಿರುವ ಆಧಾರ ಕಾರ್ಡ್ ಹಾಗೂ ಪಾನ್ ಕಾರ್ಡ್​ಗಳನ್ನು ಹೋಲಿಕೆ ಮಾಡಿ ನೋಡಿದಾಗ ರಾಜ್ಯದಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿರುವರ ಹೆಸರಿನಲ್ಲಿ 5 ಸಾವಿರ ಅಂತ್ಯೋದಯ ಅನ್ನ ಯೋಜನೆ ಕಾರ್ಡ್​ಗಳು, 80,204 ಆದ್ಯತಾ ಪಡಿತರ ಚೀಟಿಗಳು(ಬಿಪಿಎಲ್) ಪತ್ತೆಯಾಗಿದ್ದವು. ಜಿಲ್ಲಾವಾರು ಅವುಗಳನ್ನು ಪಟ್ಟಿ ಮಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಏಪ್ರಿಲ್ 21 ರಂದು ಸುತ್ತೋಲೆ ಹೊರಡಿಸಿದ್ದರು.

ಏಪ್ರಿಲ್ 28 ರೊಳಗೆ ಆ ಎಲ್ಲ ಪಡಿತರ ಚೀಟಿಗಳನ್ನು ಆದ್ಯತೇತರ(ಎಪಿಎಲ್)ವಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ಲಿಖಿತ ಹಿಂಬರಹ ನೀಡಲು ಸುತ್ತೋಲೆಯಲ್ಲಿ ಅದರಂತೆ ಜಿಲ್ಲೆಯ ಆಹಾರ ಇಲಾಖೆ ಅಂತ್ಯೋದಯ ಅನ್ನ ಭಾಗ್ಯ ಯೋಜನೆಯ 33 ಹಾಗೂ 1137 ಆದ್ಯತಾ ಪಡಿತರ ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತಿಸಿದೆ. ಇನ್ನು 3 ಕಾರ್ಡ್​ಗಳು ತಾಂತ್ರಿಕ ಕಾರಣಗಳಿಂದ ಪರಿವರ್ತನೆ ಬಾಕಿ ಇದೆ.

ಮೃತರ ಹೆಸರು ತೆಗೆಸಲು ಸೂಚನೆ
ಮೃತಪಟ್ಟ ನಂತರವೂ ಪಡಿತರ ಚೀಟಿಯಲ್ಲಿ ಅವರ ಹೆಸರು ತೆಗೆಸದೇ ಮೃತರ ಪಾಲಿನ ಧಾನ್ಯ ಪಡೆಯುತ್ತಿರುವ ಹಲವರಿದ್ದಾರೆ. ಮೃತರ ಹೆಸರುಗಳನ್ನು ಫಲಾನುಭವಿಗಳು ತಾವಾಗಿಯೇ ಮಾಹಿತಿ ನೀಡಿ ಚೀಟಿಯಿಂದ ತೆಗೆಸಿ ಹಾಕುವಂತೆ ಜಿಲ್ಲಾಧಿಕಾರಿ ಮುಲ್ಲೆ ೖ ಮುಗಿಲನ್ ಇತ್ತೀಚೆಗೆ ಪತ್ರಿಕಾ ಹೇಳಿಕೆ ಮೂಲಕ ಸೂಚನೆ ನೀಡಿದ್ದರು. ಸದ್ಯ ಆಹಾರ ಇಲಾಖೆಯಿಂದ ಮೃತರ ಪರಿಶೀಲನಾ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ 18 ಸಾವಿರಕ್ಕೂ ಅಧಿಕ ಹೆಸರು ಈ ರೀತಿ ಇರುವ ನಿರೀಕ್ಷೆ ಇದ್ದು, ಶೀಘ್ರದಲ್ಲಿ ಅದರ ವಿವರ ಲಭ್ಯವಾಗಲಿದೆ.

ತಾಲೂಕು ಪರಿವರ್ತಿಸಿರುವ ಪಡಿತರ ಚೀಟಿಗಳು
ಅಂಕೋಲಾ 107
ಭಟ್ಕಳ 160
ದಾಂಡೇಲಿ 85
ಹಳಿಯಾಳ 69
ಹೊನ್ನಾವರ 172
ಕಾರವಾರ 150
ಕುಮಟಾ 116
ಮುಂಡಗೋಡ 49
ಸಿದ್ದಾಪುರ 62
ಶಿರಸಿ 136
ಜೊಯಿಡಾ 31
ಯಲ್ಲಾಪುರ 30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net