ಐಕ್ಯ ಸ್ಥಳಕ್ಕೆ ಬಸವಭೂಮಿ ಜೋಡಿಸಿ

photo
Published on

ಬೀದರ್: ಕೃಷ್ಣಾ ಮೇಲ್ದಂಡೆ ಯೋಜನೆ (ಆಲಮಟ್ಟಿ, ಬಸವಸಾಗರ) ನೀರು ಮಾರ್ಗ ಮೂಲಕ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣಕ್ಕೆ ಅವರ ಐಕ್ಯಸ್ಥಳವನ್ನು ಜೋಡಿಸುವ ಮಹತ್ವದ ಕೆಲಸ ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ಮೂಲ ಅನುಭವ ಮಂಟಪ ಸ್ಮಾರಕ ಹೋರಾಟ ಸಮಿತಿ ಗೌರವಾಧ್ಯಕ್ಷರಾದ ಮೆಹಕರ-ತಡೋಳಾ ಮಠದ ಪೀಠಾಧಿಪತಿ ಶ್ರೀ ರಾಜೇಶ್ವರ ಶಿವಾಚಾರ್ಯರು ಸಲಹೆ ನೀಡಿದ್ದಾರೆ.

ಬಸವಣ್ಣನವರು ಕಾಯಕ ತತ್ವ ಬೋಧಿಸಿದರು. ದುಡಿವ ಕೈಗಳಿಗೆ ಕೆಲಸ ಸಿಗಬೇಕು, ಈ ಭಾಗದಲ್ಲಿ ಔದ್ಯೋಗಿಕ ಕ್ರಾಂತಿಯಾಗಬೇಕು. ನಿಜವಾದ ಕಾಯಕಜೀವಿಗಳಾದ ರೈತರ ಬದುಕು ಹಸನಾಗಬೇಕು. ಈ ಕಾರ್ಯ ಸಾಕಾರವಾಗಬೇಕಾದರೆ ಬಸವಣ್ಣನವರ ಐಕ್ಯ ಸ್ಥಳವನ್ನು ಕರ್ಮಭೂಮಿಗೆ ಜೋಡಿಸಬೇಕು. ಅಲ್ಲಿಂದ ನೀರು ತಂದು ಕಲ್ಯಾಣಕ್ಕೆ ಹರಿಸಿದಾಗ ಈ ಭಾಗ ಸಮೃದ್ಧಗೊಂಡು ಬಸವಣ್ಣನವರ ಆಶಯ ಸರ್ಕಾರ ಈಡೇರಿಸಿದಂತಾಗುತ್ತದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅತಿವೃಷ್ಟಿಯಾದರೆ, ಮಹಾರಾಷ್ಟ್ರದಿಂದ ಪ್ರವಾಹ ಬಂದರೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪದೇ ಪದೆ ಎದುರಾಗುವ ಇಂಥ ಸಮಸ್ಯೆಗೆ ಮುಕ್ತಿ ಕೊಡುವ ಜತೆಗೆ, ಕಲ್ಯಾಣ ಭಾಗಕ್ಕೂ ಬೇಕಾದಷ್ಟು ನೀರಾವರಿ ಸೌಲಭ್ಯ ಕಲ್ಪಿಸಿ ಲಕ್ಷಾಂತರ ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನೀರು ಇಲ್ಲಿಗೆ ತರಬೇಕು. ಸದ್ಯ ಸಿಂದಗಿವರೆಗೆ ಇರುವ ರಾಜಕಾಲುವೆ ಸಂಪರ್ಕ ಕಲ್ಯಾಣಕ್ಕೆ ಜೋಡಿಸಬೇಕು. ನೂತನ ಅನುಭವ ಮಂಟಪದ ಭೂಮಿಪೂಜೆಗಾಗಿ ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪ ಅವರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿ ಕ್ರಮಕ್ಕೆ ಮುಂದಾಗಬೇಕು. ಇದರಿಂದ ಬಸವಣ್ಣನವರ ಕಾಯಕ ಚಿಂತನೆಗೆ ಹಾಗೂ ಶರಣರ ಆತ್ಮಕ್ಕೆ ಶಾಂತಿಯೂ ಕೊಟ್ಟಂತಾಗುತ್ತದೆ ಎಂದು ಪ್ರತಿಪಾದಿಸಿದರು.

12ನೇ ಶತಮಾನದ ಮೂಲ ಅನುಭವ ಮಂಟಪ ಎಲ್ಲಿತ್ತು ಎಂಬ ಗೊಂದಲವಿದೆ. ಈಗ ಭೂಮಿಪೂಜೆ ಮಾಡುತ್ತಿರುವುದು ಮೂಲ ಅನುಭವ ಮಂಟಪ ಆಗಲಾರದು. ಇದು ಕೇವಲ ಒಂದು ಸ್ಮಾರಕ ಅಷ್ಟೇ. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನಮ್ಮ ಸ್ವಾಗತವಿದೆ. ಆದರೆ ಮೂಲ ಅನುಭವ ಮಂಟಪದ ಜಾಗದಲ್ಲಿ ಇದರ ನಿರ್ಮಾಣದ ಬೇಡಿಕೆ ನಮ್ಮದು. ಸರ್ಕಾರ, ಜಿಲ್ಲೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಕೆಲಸ ಆಗುತ್ತಿಲ್ಲ. ಇದರಿಂದ ಐತಿಹಾಸಿಕ ಸತ್ಯ ಮರೆಮಾಚಲಾಗುತ್ತಿದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಸಮಿತಿ ಸಂಚಾಲಕ ಓಂಪ್ರಕಾಶ ರೊಟ್ಟೆ, ಭಾಲ್ಕಿ ತಾಲೂಕು ಅಧ್ಯಕ್ಷ ಕಿರಣ ಖಂಡ್ರೆ ಇದ್ದರು.

ಎಲ್ಲ ಸ್ಮಾರಕ ಅಭಿವೃದ್ಧಿಪಡಿಸಿ
ಬಸವಕಲ್ಯಾಣ ಅನೇಕ ಶರಣರ, ಸಂತರ, ಸೂಫಿಗಳ, ಜೈನರ ಸೇರಿ ಎಲ್ಲ ಸಮಾಜದ ಮಹಾಪುರುಷರ ಪುಣ್ಯ ಭೂಮಿ. ಅಂತೆಯೇ 12 ನೇ ಶತಮಾನದಲ್ಲಿ ಎಲ್ಲ ದಾರಿ ಕಲ್ಯಾಣಕ್ಕೆ ಸೇರಿದವು. ಇಲ್ಲಿಯ ಸಮಗ್ರ ಸ್ಮಾರಕಗಳ ಜೀರ್ಣೋದ್ಧಾರ ನಡೆಯಬೇಕು. ಅಂದಾಗಲೇ ಬಸವಾದಿ ಶರಣರ ತತ್ವ, ಚಿಂತನೆ, ಆಚರಣೆಗೆ ಬೆಲೆ ಕೊಟ್ಟಂತಾಗುತ್ತದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯು ಕೇವಲ ಶರಣ ಸ್ಮಾರಕ ಅಭಿವೃದ್ಧಿಗೆ ಸೀಮಿತವಾಗುವುದು ಸರಿಯಲ್ಲ ಎಂದರು.

ಮೂಲ ಅನುಭವ ಮಂಟಪ ಬಸವಕಲ್ಯಾಣದ ಮಧ್ಯೆ ಭಾಗದಲ್ಲಿದೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಆದರೆ ಈ ಜಾಗವನ್ನು ಸ್ವಾಧೀನಕ್ಕೆ ಪಡೆದು ಅಲ್ಲಿ ಕಟ್ಟುವ ಧೈರ್ಯ ಏಕೆ ತೋರುತ್ತಿಲ್ಲ?. ಅಯೋಧ್ಯೆಯಲ್ಲಿ 5 ಸಾವಿರ ವರ್ಷದ ಹಿಂದಿನ ರಾಮಮಂದಿರ ಮೂಲ ಸ್ಥಳದಲ್ಲಿ ಕಟ್ಟುತ್ತಿರುವಾಗ ವಿಶ್ವದ ಮೊದಲ ಪಾರ್ಲಿಮೆಂಟ್ ಖ್ಯಾತಿಯ 800ವರ್ಷ ಹಿಂದಿನ ಅನುಭವ ಮಂಟಪವೇಕೆ ಮೂಲ ಜಾಗದಲ್ಲಿ ಕಟ್ಟಬಾರದು?| ಶ್ರೀ ರಾಜೇಶ್ವರ ಶಿವಾಚಾರ್ಯರುಮೂಲ ಅನುಭವ ಮಂಟಪ ಸಮಿತಿ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net