

ಹಾಸನ: ನಗರದಲ್ಲಿ ಐಐಟಿ ಸ್ಥಾಪನೆ ಉದ್ದೇಶದಿಂದ ಸ್ವಾಧೀಪಡಿಸಿಕೊಂಡಿರುವ ಸಾವಿರ ಎಕರೆ ಭೂಮಿಯಲ್ಲಿ ಕೈಗಾರಿಕಾ ಬಡಾವಣೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಈ ನಿರ್ಧಾರದ ಹಿಂದೆ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೂ ಪಾಲು ಹೋಗಿರುವ ದೂರುಗಳಿವೆ ಎಂಬುದಾಗಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದರು.
ನಗರದ ಸಂಸದರ ನಿವಾಸದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರ್ಕಾರ ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
‘ಐಐಟಿ ಸ್ಥಾಪನೆಗೆ ಮೀಸಲಾಗಿದ್ದ ಜಾಗದಲ್ಲಿ ಕೈಗಾರಿಕಾ ಬಡಾವಣೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಐದು ಪ್ಯಾಕೇಜ್ ಮಾಡಿ ಗುತ್ತಿಗೆದಾರರಿಂದ ಬಿಜೆಪಿ ಮುಖಂಡರು 20 ಕೋಟಿ ರೂ. ಲಂಚದ ಡೀಲ್ ನಡೆಸಿದ್ದಾರೆ. ಈ ಅಕ್ರಮದ ಹಿಂದೆ ಹಿಂದಿನ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಕೆಲ ಅಧಿಕಾರಿಗಳ ಕೈವಾಡ ಇದೆ. ತನಿಖೆಗೆ ಅಗತ್ಯ ದಾಖಲೆಗಳನ್ನು ನೀಡಲು ನಾನು ಸಿದ್ಧವಿದ್ದೇನೆ’ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಾಸನ ಜಿಲ್ಲೆಯನ್ನು ಕಡೆಗಣಿಸುತ್ತಾ ಬರುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಬಹಳಷ್ಟು ಅನ್ಯಾಯ ಆಯಿತು. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಕೂಡ ಮೂಲ ಸ್ವರೂಪಕ್ಕೆ ವಿರುದ್ಧವಾಗಿ ನಡೆಯುತ್ತಿದ್ದು ದ್ವೇಷದ ರಾಜಕಾರಣ ಮುಂದುವರಿಸಲಾಗಿದೆ ಎಂದು ಟೀಕಿಸಿದರು.
ಶರದ್ ಪವಾರ್ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 250 ಎಕರೆ ಭೂಮಿ ಗುರುತಿಸಲಾಗಿತ್ತು. ಆದರೆ ಹಾಲಿ ಬಿಜೆಪಿ ಸರ್ಕಾರ ಬೇಕಾಬಿಟ್ಟಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ನಡೆಸುತ್ತಿದೆ ಎಂದು ದೂರಿದರು.
ಹಾಸನ ನಗರದ ಜನತೆಗೆ ಕಡಿಮೆ ದರದಲ್ಲಿ ನಿವೇಶನ ನೀಡುವ ಉದ್ದೇಶದಿಂದ ಹಾಸನದಲ್ಲಿ 25,000 ನಿವೇಶನಗಳ ಬಡಾವಣೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅದಕ್ಕೆ ತಡೆಯೊಡ್ಡಿದೆ. ಚನ್ನಪಟ್ಟಣ ಕೆರೆ ಅಂಗಳದಲ್ಲಿ ಪಾರ್ಕ್ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದಿನ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಮಂಜೂರು ಮಾಡಿದ್ದ 140 ಕೋಟಿ ರೂ.ಗಳ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಅರಿತಿರುವ ಸ್ಥಳೀಯ ಬಿಜೆಪಿ ಮುಖಂಡರು ಬಡಾವಣೆಗಳನ್ನು ನಿರ್ಮಿಸಲು ರೈತರ ಜಮೀನು ಖರೀದಿಸುತ್ತಿದ್ದಾರೆ. ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಶಾಮಿಲಾಗಿದ್ದು ಸೂಕ್ತ ತನಿಖೆ ನಡೆಸಿದರೆ ಕಂದಾಯ ಇಲಾಖೆ ಕೆಲ ಅಧಿಕಾರಿಗಳು ಎಷ್ಟು ಅಕ್ರಮ ಆಸ್ತಿ ಮಾಡಿದ್ದಾರೆ ಎಂಬುದು ಬಯಲಿಗೆ ಬರಲಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಕಿರುಕುಳ:
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಅಲ್ಪಸಂಖ್ಯಾತರಿಗೆ ಒಂದಲ್ಲಾ ಒಂದು ರೀತಿಯ ಕಿರುಕುಳ ನೀಡುತ್ತಿವೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಗೆ ಒಡೆಯರ್, ಕುವೆಂಪು ಮತ್ತು ಪರಿಶಿಷ್ಟ ಜಾತಿ, ವರ್ಗದವರು ನೆನಪಾಗುತ್ತಿದ್ದಾರೆ. ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂಬುದಾಗಿ ಬದಲಿಸಿರುವುದು ಕೇವಲು ಚುನಾವಣಾ ಗಿಮಿಕ್ ಎಂದು ಎಚ್.ಡಿ. ರೇವಣ್ಣ ಟೀಕಿಸಿದರು.
ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜಕೀಯ ನಡೆಸುವುದು ಮತ್ತು ದುಡ್ಡು ಹೊಡೆಯುವುದು ಇವರೆಡೇ ಕೆಲಸ ಬಿಜೆಪಿಗೆ ಗೊತ್ತಿರುವುದು. ಬಿಜೆಪಿಗೆ ಮುಸ್ಲಿಮರು ಮತ ಹಾಕುವುದ್ಲಿಲ ಎಂಬ ಕಾರಣಕ್ಕೆ ಅವರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಯಾರೋ ಪುಣ್ಯಾತ್ಮರು ಹಿಂದೆ ರೈಲಿಗೆ ಟಿಪ್ಪು ಹೆಸರಿಟ್ಟಿದ್ದರು. ಈಗ ಅದನ್ನು ಬದಲಿಸುವ ಅಗತ್ಯ ಇರಲಿಲ್ಲ. ಮೈಸೂರಿಗೆ ಎಷ್ಟೊಂದು ರೈಲುಗಳು ಬರುತ್ತವೆ. ಅವುಗಳಲ್ಲಿ ಯಾವುದಕ್ಕಾದರೂ ಒಡೆಯರ್ ಹೆಸರು ಇಡಬಹುದಿತ್ತು. ರಾಜ್ಯಕ್ಕೆ ಒಡೆಯರ ಕೊಡುಗೆ ಅಪಾರ ಇದೆ. ಮೂರು ವರ್ಷಗಳ ಹಿಂದೆಯೇ ಈ ಕೆಲಸ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದಲಿತರಿಗೆ ಒಳಮೀಸಲಾತಿ ಕೊಡಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಬಿಜೆಪಿ ಸರ್ಕಾರಕ್ಕೆ ಚುನಾವಣೆ ಸಮೀಪಿಸಿದ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಜ್ಞಾನೋದಯವಾಗುತ್ತದೆ ಎಂದು ಕುಟುಕಿದರು.
ಪ್ರೀತಂಗೌಡರಿಗೆ ಮರು ಸವಾಲು:
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಎಚ್.ಡಿ. ರೇವಣ್ಣ ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಶಾಸಕ ಪ್ರೀತಂಗೌಡ ಹಾಕಿರುವ ಸವಾಲು ಕುರಿತು ಪ್ರಸ್ತಾಪಿಸಿದ ಎಚ್.ಡಿ. ರೇವಣ್ಣ, ‘ನಾವು ಸವಾಲು ಸ್ವೀಕರಿಸಿದ್ದೇವೆ. ಆದರೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ. ನನ್ನ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾದರೆ, ಸಾಮಾನ್ಯ ಕಾರ್ಯಕರ್ತನ ವಿರುದ್ಧ ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬುದನ್ನು ಶಾಸಕರು ಹೇಳಲಿ. ಲೀಡರ್ ರೇವಣ್ಣ ವಿರುದ್ಧ 50,000 ಮತಗಳ ಅಂತರ ಆದರೆ, ಕಾರ್ಯಕರ್ತನ ವಿರುದ್ಧ 75,000 ಮತಗಳ ಅಂತರದಲ್ಲಿ ಗೆಲ್ಲುತ್ತಾರೆಯೇ ಹೇಳಲಿ’ ಎಂದು ಮರು ಸವಾಲು ಹಾಕಿದರು.
‘ನಾನು 25 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ, ಇಂತಹ ಸವಾಲಗಳನ್ನು ಸ್ವೀಕರಿಸಿ ಚುನಾವಣೆ ಎದುರಿಸುವುದು ನನಗೆ ಹೊಸದೇನು ಅಲ್ಲ’ ಎಂದು ನುಡಿದರು.