

ವಿಜಯವಾಣಿ ಸುದ್ದಿಜಾಲ ಧಾರವಾಡ
ಐಐಐಟಿ ನೂತನ ಕಟ್ಟಡ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೆ. 26ರಂದು ನೆರವೇರಿಸುವರು. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಶನಿವಾರ ಮಧ್ಯಾಹ್ನ ಐಐಐಟಿ ಆವರಣಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಸೇರಿ ಸುಮಾರು 700 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎಸ್‌ಪಿಜಿಯವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರಿಗೆ ಭದ್ರತಾ ಉಸ್ತುವಾರಿ ವಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ, ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಐಐಐಟಿ ನಿರ್ಮಾಣಕ್ಕೆ ಜಾಗ ನೀಡಿದ ರೈತರು ಪಾಲ್ಗೊಳ್ಳಲಿದ್ದು, ಅವರಿಗೆ ಸನ್ಮಾನಿಸಲಾಗುವುದು. ರಾಷ್ಟ್ರಪತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಬಗ್ಗೆ ಇನ್ನೂ ಚರ್ಚಿಸಿಲ್ಲ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆ ಸಮರ್ಪಕವಾಗಿ ನಡೆಯುತ್ತಿದೆ ಎಂದ ಅವರು, ಈಗಾಗಲೇ ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿ ಊಟದ ಮೆನು ನೀಡಿದ್ದಾರೆ. ಆ ಪ್ರಕಾರ ಊಟ ಸಿದ್ಧಪಡಿಸಲಾಗುತ್ತದೆ. ಅದರೊಂದಿಗೆ ಉತ್ತರ ಕರ್ನಾಟಕ ಶೈಲಿಯ ಊಟವೂ ಇರಲಿದೆ ಎಂದರು.
ಐಐಐಟಿ ಕುಲಸಚಿವ ಚನ್ನಪ್ಪ ಅಕ್ಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಐಐಐಟಿ ಅಧಿಕಾರಿಗಳು, ಪಾಲಿಕೆ ಸದಸ್ಯರು, ಇತರರು ಇದ್ದರು.