ಐಎಸ್‌ಐ ಗುರುತು ನಖಲಿಯಾದೀತು ! ; ಟೆಂಡರ್ ಪ್ರಕ್ರಿಯೆಯಲ್ಲಿ ಎಚ್ಚರಿಕೆ ವಹಿಸಿ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಎಚ್ಚರಿಕೆ

TMK_ZP_Sabhangan 2
Published on

ತುಮಕೂರು : ಸರ್ಕಾರದ ವಿವಿಧ ಯೋಜನೆಗಳಡಿ ಇಲಾಖೆಗಳಲ್ಲಿ ಖರೀದಿಸಲಾಗುತ್ತಿರುವ ಸಾಮಗ್ರಿಗಳಲ್ಲಿ ನಕಲಿ ಐಎಸ್‌ಐ ಮಾರ್ಕ್ ಇದ್ದು ಈ ಬಗ್ಗೆ ಟೆಂಡರ್ ಪ್ರಕ್ರಿಯೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅಧಿಕಾರಿಗಳಿಗೆ ಎಚ್ಚರಿಸಿದರು.

ಕೇಂದ್ರದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್(ಬಿಎಸ್‌ಐ)ನ ಬೆಂಗಳೂರು ಶಾಖಾ ಕಚೇರಿ ವತಿಯಿಂದ ಜಿಲ್ಲಾಮಟ್ಟದ ಅಧಿಕಾರಿಗಳಿಗಾಗಿ ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳಡಿ ಕಾರ್ಯಗತಗೊಳಿಸುವ ಸರಕುಗಳ ಖರೀದಿಗೆ ಸಂಬಂಧಿಸಿದಂತೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐಎಸ್‌ಐ ಗುರುತು ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು ಹಾಗೂ ಐಎಸ್‌ಐ ಗುರುತಿನ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದರು.

ಎಲೆಕ್ಟ್ರಾನಿಕ್ ಮತ್ತು ಐಟಿ ಸಂಬಂಧಿತ ವಸ್ತುಗಳನ್ನು ಖರೀದಿಸುವಾಗ ಐಎಸ್ ಸಂಖ್ಯೆ, ಬಿಐಎಸ್‌ನಿಂದ ನೀಡಲಾದ 7 ಅಥವಾ 10 ಅಂಕಿಗಳ ಪರವಾನಗಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರುವ ಬಗ್ಗೆ ಪರಿಶೀಲಿಸಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಇಲಾಖೆಗಳು ಇಪ್ರೊಕ್ಯೂರ್‌ಮೆಂಟ್, ಪೋರ್ಟಲ್ ಮೂಲಕ ವಿವಿಧ ಕಾಮಗಾರಿ ಹಾಗೂ ಕಚೇರಿಯ ದಿನನಿತ್ಯ ಬಳಕೆಗಾಗಿ ಬಳಸಲಾಗುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಖರೀದಿ ಸಂದರ್ಭದಲ್ಲಿ ಅಧಿಕಾರಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಅರಿವು ನೀಡಲು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.

ಬಿಐಎಸ್‌ನ ನಿರ್ದೇಶಕ ಅಮಿತ್ ರಾಯ್ ಮಾತನಾಡಿ, 2016ರಲ್ಲಿ ಬಿಐಎಸ್ ಕಾಯ್ದೆ ಜಾರಿಗೆ ತರಲಾಗಿದ್ದು, ಕಾಯ್ದೆ ಉಲ್ಲಂಘನೆ ಮಾಡಿದವರಿಗೆ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಮೊದಲ ಉಲ್ಲಂಘನೆಗೆ 2 ಲಕ್ಷ ರೂ.ಗಳಿಗಿಂತ ಕಡಿಮೆ ಇರದ ಮೌಲ್ಯದ ದಂಡ ಹಾಗೂ ಎರಡನೇ ಮತ್ತು ಆ ನಂತರದ ಉಲ್ಲಂಘನೆಗಾಗಿ 5 ಲಕ್ಷ ರೂ.ಗಳಿಗಿಂತ ಕಡಿಮೆ ಇರದ ಮೌಲ್ಯದ ದಂಡ ಅಥವಾ ಉತ್ಪಾದಿಸಿದ/ಮಾರಾಟ ಮಾಡಿದ/ಮಾರಾಟ ಮಾಡಲು ಉದ್ದೇಶಿಸಿದ ಪ್ರಮಾಣದ ಗುರುತಿನ ಸರಕು, ಸಾಮಗ್ರಿಗಳ ಮೌಲ್ಯದ ಹತ್ತು ಪಟ್ಟು ಮೌಲ್ಯದ ದಂಡ ವಿಧಿಸಲಾಗುವುದು ಎಂದರು.

ದೆಹಲಿಯಲ್ಲಿ ಕೇಂದ್ರ ಕಚೇರಿ ಸೇರಿ ದೇಶದಲ್ಲಿ ಬ್ಯೂರೋ ಆಫ್ ಇಂಡಿಯ ಸ್ಟಾಂಡರ್ಡ್ಸ್‌ನ 42 ಶಾಖಾ ಕಚೇರಿ, 5 ವಿಭಾಗೀಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಬಿಐಎಸ್‌ನ ಮುಖ್ಯಸ್ಥೆ ಶಿವಾಂಗಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಕಟ್ಟಡ ಕಾಮಗಾರಿಗಳಲ್ಲಿ ಬಳಸುವ ಸಿಮೆಂಟ್, ಕಬ್ಬಿಣ, ಗೃಹಬಳಕೆಯ ಗ್ಯಾಸ್ ಸಿಲಿಂಡರ್, ಪ್ಯಾಕೇಜ್ ಕುಡಿಯುವ ನೀರು, ರಸಗೊಬ್ಬರ, ರಾಸಾಯನಿಕಗಳು, ವೈದ್ಯಕೀಯ ಉಪಕರಣ, ಕುಡಿಯುವ ನೀರಿನ ಸಂಪರ್ಕಕ್ಕೆ ಬಳಸುವ ಪಿವಿಸಿ ಪೈಪ್, ಪಂಪು ಮೋಟಾರ್, ಅಂಗನವಾಡಿಗಳಲ್ಲಿ ವಿತರಿಸುವ ಆಹಾರ, ಶಾಲೆಗಳಿಗೆ ಪೂರೈಕೆ ಮಾಡುವ ಹಾಲಿನ ಪುಡಿ, ಕ್ರೀಡಾ ಸಾಮಗ್ರಿ ಸೇರಿ ಎಲ್ಲ ರೀತಿಯ ಹಾಲಿನ ಉತ್ಪನ್ನಗಳು, ಜಾನುವಾರುಗಳ ಆಹಾರ ಪೊಟ್ಟಣಗಳ ಮೇಲೆ ಐಎಸ್‌ಐ ಗುರುತು ಇರುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಂಡು ಖರೀದಿಸಬೇಕು. ಅಮಿತ್ ರಾಯ್, ಬಿಐಎಸ್‌ನ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net