

ಆಲೂರು: ತಾಲೂಕು ಕಚೇರಿಯಲ್ಲಿ ಹಾಸನದ ಭಾರತೀಯ ಸೇವಾದಳ, ತಾಲೂಕು ಭಾರತ ಸೇವಾದಳದ ವತಿಯಿಂದ ಸ್ವಾತಂತ್ರೊೃೀತ್ಸವದ ಅಂಗವಾಗಿ ಗುರುವಾರ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗೆಗೆ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಭಾರತ ಸೇವಾದಳ ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ.ಎನ್.ಮಹೇಶ್ ಮಾತನಾಡಿ, ರಾಷ್ಟ್ರಧ್ವಜವನ್ನು ಖಾದಿ ಭಂಡಾರಗಳಲ್ಲಿ ಅದರಲ್ಲಿಯೂ ಐಎಸ್‌ಐ ಚಿಹ್ನೆ ಇರುವ ಧ್ವಜವನ್ನೇ ಖರೀದಿಸಬೇಕು. ನಿರ್ದಿಷ್ಟ ಅಳತೆ ಧ್ವಜವನ್ನೇ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಧ್ವಜಗಳನ್ನು ಎಂದೂ ಬಳಸಬಾರದು. ಅಲ್ಲದೆ ಮಕ್ಕಳಿಗೂ ರಾಷ್ಟ್ರಧ್ವಜದ ಮಹತ್ವ ಹಾಗೂ ಅದರ ಆರೋಹಣ ಮತ್ತು ಅವರೋಹಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರಾಷ್ಟ್ರಗೀತೆ ಹಾಡುವಾಗ ಅನೇಕ ನಿಯಮಗಳಿದ್ದು, ಸ್ಪಷ್ಟ ಮತ್ತು ತಪ್ಪಿಲ್ಲದಂತೆ ರಾಷ್ಟ್ರಗೀತೆ ಹಾಡಬೇಕು. ಅಲ್ಲದೇ ರಾಷ್ಟ್ರಧ್ವಜವನ್ನು ಹಾರಿಸಿದ ಸಂದರ್ಭದಲ್ಲಿ ವಂದೇ ಮಾತರಂ, ರಾಷ್ಟ್ರಗೀತೆ, ಧ್ವಜಗೀತೆಗಳನ್ನು ಕಡ್ಡಾಯವಾಗಿ ಹಾಡಬೇಕು. ಧ್ವಜಸ್ತಂಭವು ನಿರ್ದಿಷ್ಟ ಅಳತೆಯಲ್ಲಿರಬೇಕೆಂದೇನೂ ಇಲ್ಲ. ಆದರೆ ಧ್ವಜಸ್ತಂಭ ಹಾಗೂ ಧ್ವಜದ ಕಂಬ ಬಿಳಿ ಬಣ್ಣದಿಂದ ಕೂಡಿರಬೇಕು. ಧ್ವಜಾರೋಹಣ ಹಾಗೂ ಧ್ವಜ ಅವರೋಹಣದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಪ್ರತಿಯೊಂದು ಹಂತವನ್ನು, ಧ್ವಜಕ್ಕೆ ಕಟ್ಟುವ ನೂಲಿನ ದಾರ, ಧ್ವಜಕಂಬದ ಸುತ್ತಳತೆ, ಧ್ವಜ ರಕ್ಷಕರ ಪಾತ್ರ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಭಾರತ ಸೇವಾದಳ ಜಿಲ್ಲಾ ವಲಯ ಸಂಘಟಕಿ ರಾಣಿ ಬಿ.ಎಸ್.ರಾಣಿ ಮಾತನಾಡಿ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಮಹತ್ವ ಹಾಗೂ ಅದರ ಇತಿಹಾಸದ ಬಗ್ಗೆ ತಿಳಿಸಿ ರಾಷ್ಟ್ರಧ್ವಜವನ್ನು ಕಟ್ಟುವ ಹಾಗೂ ಇಳಿಸುವ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ರಾಷ್ಟ್ರಧ್ವಜವನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಭಾರತ ಸೇವಾದಳದ ತಾಲೂಕು ಸಮಿತಿ ಅಧ್ಯಕ್ಷ ಎಂ.ಬಾಲಕೃಷ್ಣ ಜಿಲ್ಲಾ ಸಮಿತಿ ಸದಸ್ಯ ಎಸ್.ಎಸ್.ಶಿವಮೂರ್ತಿ, ಉಪಾಧ್ಯಕ್ಷ ಶಾಂತಕೃಷ್ಣ, ಉಪ ತಹಸೀಲ್ದಾರ್ ಎನ್.ಸಿ.ರಮೇಶ್, ಶಿರಸ್ತೇದಾರ್ ಅಶೋಕ್, ಸ್ವಯಂ ಸೇವಕರಾದ ಸುರೇಶ್, ತಾಲೂಕು ಕಚೇರಿ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಹಾಜರಿದ್ದರು.